ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನ ನೆಲೆ ಪಾಕಿಸ್ತಾನದಲ್ಲೇ ಇದೆ ಎಂಬುದನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ೧೭ ವರ್ಷಗಳ ಹಿಂದೆಯೇ ಪ್ರಕಟಿಸಿದ ದಾಖಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ಮಾಹಿತಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತೀಯ ಸ್ಥಾಯಿ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ತಿಳಿಸಿದರು.
೨೦೦೧ರ ಅಕ್ಟೋಬರ್ ೧೯ರಂದು ಹೊರಡಿಸಲಾದ ಹೇಳಿಕೆಯು, ೨೦೦೦ರಲ್ಲಿ ಮಂಡಿಸಲಾದ ನಿರ್ಣಯ ಸಂಖ್ಯೆ ೧೩೩೩ಯ ೮(ಸಿ) ಪಂಕ್ತಿಯತ್ತ ಗಮನ ಸೆಳೆಯುತ್ತದೆ. ಈ ಪಂಕ್ತಿಯು, ಒಸಾಮಾ ಬಿನ್ ಲಾಡೆನ್‌ಗೆ ಸಂಬಂಧಿತ ನಿಧಿ ಹಾಗೂ ಇತರೆ ಹಣಕಾಸಿನ ಸ್ವತ್ತುಗಳನ್ನು ಜಪ್ತಿ ಮಾಡಿ ಆತನಿಗೆ ಸಲ್ಲಬೇಕಾದ ಎಲ್ಲಾ ಹಣವನ್ನು ಸ್ಥಗಿತಗೊಳಿಸಲು ಕರೆ ನೀಡಿತ್ತು.
ಸುದ್ದಿಗೋಷ್ಠಿಯೊಂದರಲ್ಲಿ ಪಾಕಿಸ್ತಾನಿ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ತಮ್ಮ ದೇಶ ಪುಲ್ವಾಮಾ ಹತ್ಯಾಕಾಂಡದಲ್ಲಿ ಭಾಗಿಯಾಗಿದೆ ಎಂಬ ಅಂಶವನ್ನು ತಳ್ಳಿಹಾಕಿದರು. ಇದಕ್ಕೆ ಪ್ರತ್ಯುತ್ತರವಾಗಿ ಈ ವಿಚಾರವನ್ನು ಅಕ್ಬರುದ್ದೀನ್ ಟ್ವೀಟ್ ಮೂಲಕ ತಿಳಿಯಪಡಿಸಿದರು.
ಸದ್ಯಕ್ಕೆ ಭಾರತವು ಜೈಷ್-ಎ-ಮೊಹಮ್ಮದ್ ಭಯೋತ್ಪಾದನಾ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್‌ನನ್ನು ಜಾಗತಿಕ ಭಯೊತ್ಪಾದಕ ಎಂದು ಘೋಷಿಸಲು ಭಾರತ ಸಕಲ ಪ್ರಯತ್ನ ಮಾಡುತ್ತಿದೆ. ಚೀನಾ ಇದುವರೆಗೂ ಅದೇನೋ “technical hold” ಎಂಬ ಯಾರಿಗೂ ಅರ್ಥವಾಗದ ಪದಗಟ್ಟನ್ನು ಬಳಸಿ ಅಡ್ಡಗಾಲು ಹಾಕುತ್ತಾ ಬಂದಿದೆ.
