ಕೊಡಗಿನ ಹುತಾತ್ಮ ಯೋಧನ ಕುಟುಂಬಕ್ಕೆ ನೆರವಾಗುವವರಿಲ್ಲ!
ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಯೋಧನ ಕುಟುಂಬಕ್ಕೆ ಬಾಡಿಗೆ ಮನೆ ವಾಸ
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಯೋಧನ ಪತ್ನಿಗೆ ಆರ್ಥಿಕ ಭದ್ರತೆ ಇಲ್ಲ.
ಸೇನೆಯ ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಕೊಡಗು ಜಿಲ್ಲೆಯ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯೋಧನ ಕುಟುಂಬ ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆಯದೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದೆ. ಯಾರೂ ಈ ಕುಟುಂಬದ ದುಸ್ಥಿತಿ ಬಗ್ಗೆ ಗಮನ ಹರಿಸುತ್ತಿಲ್ಲ.
ಸೇನೆಯಲ್ಲಿದ್ದ ಪತಿ ಹುತಾತ್ಮರಾದ ಬಳಿಕ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಾನ ಎಂಬಲ್ಲಿ ಮಂಜುಳ ತನ್ನ ಇಬ್ಬರು ಮಕ್ಕಳೊಂದಿಗೆ ಸೌಲಭ್ಯ ವಂಚಿತರಾಗಿ ಬಾಡಿಗೆ ಮನೆಯಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಭಾರತೀಯ ಸೇನೆಯ ಬಿ.ಎಸ್.ಎಫ್ ನ ೩ನೇ ಬೆಟಾಲಿಯನ್ ನಲ್ಲಿ ಕರ್ತವ್ಯದಲ್ಲಿದ್ದವರು ೨೦೦೬ರ ಮಾರ್ಚ್ ೨೩ರಂದು ಮೃತಪಟ್ಟಿದ್ದರು.
ಕರ್ತವ್ಯಗಲ್ಲಿರುವಾಗ ಯೋಧ ಮೃತಪಟ್ಟರೆ ಕೆಲವೊಂದು ಸೌಲಭ್ಯಗಳು ಸರ್ಕಾರದ ವತಿಯಿಂದ ದೊರೆಯುತ್ತದೆ. ಆದರೆ ಗೋಪಾಲ್ ಅವರ ಪತ್ನಿ ಮಂಜುಳಾಗೆ ಪತಿಯ ಪಿ.ಎಫ್. ಹಣ ೩ ಲಕ್ಷ ರೂಪಾಯಿಗಳು ಮಾತ್ರ ದೊರಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಣ್ಣ ವಯಸ್ಸಿನಲ್ಲೇ ವಿಧವೆಯಾದ ಆತನ ಪತ್ನಿ ಮಂಜುಳಾಗೆ ಯಾವ ಸೌಲಭ್ಯಗಳನ್ನು ನೀಡಲೇ ಇಲ್ಲ. ಅಂದು ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಿ, ನಿಮ್ಮ ಪತಿ ಕಾರ್ಯನಿರ್ವಹಿಸಿರುವುದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ. ತನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ವಾಪಸ್ ಕಳುಹಿಸಿರುವುದಾಗಿ ಮಂಜುಳಾ ಅಳಲು ತೋಡಿಕೊಳ್ಳುತ್ತಿದ್ದಾರೆ.
ಕುಟುಂಬ ನಿರ್ವಹಣೆಗೂ ಹರಸಾಹಸ:
ಮಂಜುಳಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗ ದಿಲನ್ ಮತ್ತು ದಿಯಾನ್ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ, ಕುಟುಂಬ ನಿರ್ವಹಣೆ ಸೇರಿದಂತೆ ಇತರೆ ಖರ್ಚುಗಳನ್ನು ನಿಭಾಯಿಸಲು ಮಂಜುಳಾ ಪರದಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದಿರುವ ತನಗೆ ಸರ್ಕಾರಿ ಕೆಲಸ ನೀಡಿ, ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶ ನೀಡಿ ಎಂದು ಸರ್ಕಾರವನ್ನು ಬೇಡಿಕೊಳ್ಳುತ್ತಿದ್ದಾರೆ.
ತಾನು ವಿದ್ಯಾವಂತೆಯಾಗಿದ್ದು ತನಗೆ ಯಾವುದೇ ‘ಎ’ ಗ್ರೇಡ್ ಸರ್ಕಾರಿ ಕೆಲಸ ಬೇಡ. ಯಾವುದಾದರೂ ಕಛೇರಿಯಲ್ಲಿ ಅಟೆಂಡರ್ ಹುದ್ದೆ ನೀಡಿ ಕುಟುಂಬ ನರ್ವಹಣೆ ಮಾಡಲು ಸಹಾಯಹಸ್ತ ನೀಡುವಂತೆ ಆಕೆ ಅಂಗಲಾಚುತ್ತಿದ್ದಾರೆ. ತನ್ನ ಸಮಸ್ಯೆಯನ್ನು ಬಗೆಹರಿಸಲು ಶಾಸಕರಿಗಾಗಲಿ, ಸಚಿವರಿಗಾಗಲಿ ಮನಸಿಲ್ಲ. ತನ್ನ ಗಂಡು ಮಗುವನ್ನು ದೇಶ ಸೇವೆಗೋಸ್ಕರ ಭಾರತೀಯ ಸೇನೆಗೆ ಸೇರಿಸುವ ಅಭಿಲಾಷೆ ಇದೆ. ಮುಂದೆ ಅದಕ್ಕೆ ಪ್ರಯತ್ನ ಮಾಡುವುದಾಗಿ ಆಕೆ ಹೇಳುತ್ತಾರೆ.
“ನಾನು ಮಕ್ಕಳನ್ನು ಓದಿಸಲು ಕಷ್ಟ ಪಡುತ್ತಿದ್ದೇನೆ. ನನಗೆ ಸರ್ಕಾರ ಸೌಲಭ್ಯಗಳನ್ನು ನೀಡಬೇಕು, ನನ್ನ ಪತಿ ಭಾರತಾಂಬೆಯ ಮಡಿಲಲ್ಲಿ ವೀರ ಮರಣ ಹೊಂದಿದ್ದಾರೆ. ನನಗೆ ಸಹಾಯ ಮಾಡಿ ಸಮಾಜದಲ್ಲಿ ಬದುಕಲು ಅವಕಾಶ ನೀಡಿ. ಮುಂದೆ ನನ್ನ ಮಗನನ್ನು ಸಹ ಸೇನೆಗೆ ಸೇರಿಸಿ ಭಾರತ ಮಾತೆಯ ರಕ್ಷಣೆಗೆ ಕಳುಹಿಸುತ್ತೇನೆ.” :-ಟಿ.ಎಸ್.ಮಂಜುಳಾ, ಯೋಧನ ಪತ್ನಿ.