ಭಾರತವು ಪುಲ್ವಾಮಾ ಭಯೋತ್ಪಾದಕ ಕೃತ್ಯಗಳ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದಕ್ಕೆ ತನ್ನಲ್ಲಿರುವ ಸಾಕ್ಷ್ಯವನ್ನು ಪಾಕಿಸ್ತಾನದೊಂದಿಗೆ ಹಂಚಬೇಕು ಎಂದು ಪಿಡಿಪಿ ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ಪಾಕಿಸ್ತಾನಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ ಎಂಬುದನ್ನು ನಿರೀಕ್ಷಿಸಲು ಪಾಕಿಸ್ತಾನದೊಂದಿಗೆ ಸಾಕ್ಷ್ಯ ಹಂಚುವುದು ಮುಖ್ಯ ಎಂದರು.
“ಪಠಾಣ್‌ಕೋಟ್ ಅಥವಾ ಮುಂಬಯಿ ಭಯೋತ್ಪಾದನಾ ಕೃತ್ಯಗಳಾಗಲಿ, ಅಂದು ಸಾಕ್ಷ್ಯಗಳನ್ನು ಪಾಕಿಸ್ತಾನದೊಂದಿಗೆ ಹಂಚಲಾಗಿತ್ತು. ಆದರೆ ಆ ದೇಶ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಮ್ರಾನ್ ಖಾನ್ ಪ್ರಧಾನ ಮಂತ್ರಿಯಾಗಿ ಕೆಲವು ತಿಂಗಳುಗಳಾಗಿವೆಯಷ್ಟೆ. ಅವರಿಗ ಅವಕಾಶ ಕೊಡಬೇಕು. ಅವರೊಂದಿಗೆ ಸಾಕ್ಷ್ಯ ಹಂಚಿ ಅವರು ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ” ಎಂದು ಮಹಬೂಬಾ ಹೇಳಿದರು.
ಪುಲ್ವಾಮಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆ ಹಿಂಪಡೆದ ಕ್ರಮವನ್ನು “ಬಾಲಿಶ” ಎಂದು ಮಹಬೂಬಾ ಹೇಳಿದರು. ಯುದ್ಧದ ಬದಲು ಮಾತುಕತೆಯೆ ಮೇಲು ಎಂದು ಅವರು ಒತ್ತಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ ೩೭೦ನ್ನು ರದ್ದುಗೊಳಿಸಿದಲ್ಲಿ ಯಾವೊಬ್ಬ ಕಾಶ್ಮೀರಿಯೂ ಸಹ ಭಾರತದ ತ್ರಿವರ್ಣವನ್ನು ಕೈಯಲ್ಲಿ ಹಿಡಿಯಲಾರರು ಎಂದು ಮಹಬೂಬಾ ಎಚ್ಚರಿಸಿದರು.