ರಾಷ್ಟ್ರೀಯ ಹೆದ್ದಾರಿ ೪ಎ ಅಗಲಗೊಳಿಸುವ ಸಲುವಾಗಿ ಕಾನೂನುಬಾಹಿರವಾದ ಮರ ಕಡಿತದ ವಿರುದ್ಧ ಪರಿಸರವಾದಿಗಳು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಿದ್ದಾರೆ.
ಫೆಬ್ರುವರಿ ೧ರಂದು ನ್ಯಾಯಾಲಯವು ಈ ಪಿಐಎಲ್‌ಅನ್ನು ಪರಿಗಣಿಸಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಗೆ ನೋಟೀಸ್ ಕಳುಹಿಸಿದೆ.
ಈಗಾಗಲೇ ಹೆದ್ದಾರಿಯ ಅಗಲಗೊಳಿಸುವಿಕೆಗಾಗಿ ಬೆಳಗಾವಿಯ ಖಾನಾಪುರದಿಂದ ಗೋವಾ ಗಡಿಯ ತನಕ ಸಾವಿರಾರು ಮರಗಳನ್ನು ಕಡಿದು ಹಾಳುಮಾಡಲಾಗಿದೆ. ಈ ಹೆದ್ದಾರಿಯ ೧೪ ಕಿಲೋಮೀಟರಿನಷ್ಟು ಭಾಗವು ಖಾನಾಪುರ-ಜಾಂಬೋಟಿ ದಟ್ಟ ಕಾಡಿನ ಮೂಲಕ ಹಾದುಹೋಗುತ್ತದೆ. ಈ ಕಾಡಿನಲ್ಲಿ ಆನೆಗಳು, ಹುಲಿಗಳು, ನಾಗರಹಾವುಗಳು ಸೇರಿದಂತೆ ಹಲವು ಕಾಡುಪ್ರಾಣಿಗಳಿವೆ. ಅಲ್ಲದೆ, ದಾಂಡೇಲಿ ರಕ್ಷಿತಾರಣ್ಯ ಮತ್ತು ಖಾನಾಪುರ-ಜಾಂಬೋಟಿ ಕಾಡುಗಳ ನಡುವೆ ಇರುವ ಆನೆ ಕಾರಿಡಾರ್ ಸಹ ಹಾಳಾಗಲಿದೆ ಎಂದು ಖ್ಯಾತ ಪರಿಸರವಾದಿ, ಚಲನಚಿತ್ರ ನಟ-ನಿರ್ದೇಶಕ ಸುರೇಶ್ ಹೆಬ್ಳೀಕರ್ ಮತ್ತು ಇತರೆ ಪರಿಸರವಾದಿಗಳು ತಮ್ಮ ಮೊಕದ್ದಮೆಯಲ್ಲಿ ವಾದಿಸಿದ್ದಾರೆ.
ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆಯದೆ ಹಾಗೂ ಖಾಸಗಿ ವ್ಯಕ್ತಿಗಳಿಂದ ಜಮೀನನ್ನು ಕೊಂಡುಕೊಳ್ಳದೆ, ಆನೆ ಕಾರಿಡಾರ್ ಮತ್ತು ಕಾಡನ್ನು ಕೆಡಿಸಿ ರಸ್ತೆ ಅಗಲ ಮಾಡುವ ಉದ್ದೇಶ ಖಂಡಿತವಾಗಿಯೂ ಸರಿಯಲ್ಲ ಎಂದು ಪರಿಸರವಾದಿಗಳು ತಮ್ಮ ಪಿಐಎಲ್‌ನಲ್ಲಿ ವಾದಿಸಿದರು.
