ಇಷ್ಟು ವರ್ಷ ಮಲೆನಾಡು ವಾಸಿಗಳಲ್ಲಿ ಆತಂಕ ಮೂಡಿಸಿದ ಮಂಗನ ಕಾಯಿಲೆ (ಕೆಎಫ್‌ಡಿ ವೈರಸ್) ಚಿಕ್ಕಮಗಳೂರಿನಲ್ಲೂ ಸಹ ಕಾಣಿಸಿಕೊಂಡಿದೆ.
ಕಳೆದ ಒಂದು ತಿಂಗಳಲ್ಲಿ ಶೃಂಗೇರಿ, ಕೊಪ್ಪ ಮತ್ತು ಎನ್ ಆರ್ ಪುರದಲ್ಲಿ ಒಟ್ಟು ಒಂಬತ್ತು ಮಂಗಗಳು ಸತ್ತವು. ಅವುಗಳಿಂದ ನಾಲ್ಕು ಮಾದರಿಗಳ ರಕ್ತವನ್ನು ಮಂಗಳೂರು, ಶಿವಮೊಗ್ಗ ಹಾಗೂ ಪುಣೆಯಲ್ಲಿರುವ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಇತ್ತೀಚೆಗೆ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಲಕ್ಕವಳ್ಳಿ ಸನಿಹ ಗೋಪಾಲ ಕಾಲೋನಿಯಲ್ಲಿ ಒಂದೇ ದಿನ ಎರಡು ಮಂಗಗಳು ಜ್ವರದಿಂದ ಸತ್ತದ್ದು ವರದಿಯಾಗಿದೆ. ಸುತ್ತಮುತ್ತಲ ಪ್ರದೇಶದ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.
ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರ್ ಅವರು ಹೇಳಿದ ಪ್ರಕಾರ, ಈ ಮಂಗಗಳ ರಕ್ತ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿ, ಆ ಮಂಗಗಳನ್ನು ಸುಟ್ಟುಹಾಕಲಾಗಿದೆ.
ಲಕ್ಕವಳ್ಳಿ ಭದ್ರಾ ಅಣೆಕಟ್ಟಿನ ತಪ್ಪಲಲ್ಲಿದೆ. ಇದರ ಸುತ್ತಮುತ್ತ ದಟ್ಟ ಅರಣ್ಯವಿದೆ.
ಮಂಗನ ಕಾಯಿಲೆ ಮಹಾಮಾರಿಗೆ ೧೯೯೦ರ ದಶಕದಲ್ಲಿ ಮೂವರು ಸತ್ತರು. ಈ ಕಾಯಿಲೆ ನಮಗೆ ಬಾರದಿರಲಿ ಎಂದು ಜನರು ಅಕ್ಷರಶಃ ಆಂಜನೇಯನ ಮೊರೆಹೋಗುತ್ತಿದ್ದಾರೆ. ಆದರೆ ಪ್ರಯೋಗಾಲಯದಿಂದ ರಕ್ತ ಪರೀಕ್ಷೆ ವರದಿ ಬಂದ ನಂತರವೇ ಸತ್ಯಾಂಶ ಗೊತ್ತಾಗುವುದು.