ನಮ್ಮೂರಿನ ಬಗ್ಗೆ ನಾವು ಪರಸ್ಥಳದವರೊಂದಿಗೆ ಈ ರೀತಿ ಹೇಳಿಕೊಳ್ಳುವುದುಂಟು:
“ನಮ್ಮೂರಿನಲ್ಲಿ ಆ ಗುಡ್ಡ ಇದೆ, ಈ ಜಲಪಾತ ಇದೆ, ಇಂಥಾ ಕಾಡು ಇದೆ, ಇಷ್ಟೊಂದು ಪ್ರಾಣಿಗಳಿವೆ, ಇಷ್ಟು ಮಂಜಿದೆ, ಅಷ್ಟು ಮಳೆ ಬರುತ್ತೆ, ಅಲ್ಲಿ ಕಣಿವೆ ಇದೆ, ಇಲ್ಲಿ ವಿಶಾಲವಾದ ಬಯಲಿದೆ, ಅಷ್ಟೆತ್ತರದ ಮರಗಳಿವೆ, ತಣ್ಣನೆಯ ಗಾಳಿ ಇದೆ, ಶುಭ್ರವಾದ ನೀರಿನ ಝರಿಗಳಿವೆ, ಹಸಿರಿನ ಗದ್ದೆಗಳಿವೆ, ಕಾಡುಕೋಳಿಗಳು ಕೆಕ್ಕರಿಸುತ್ತವೆ, ಕಾಟಿ ರಸ್ತೆ ಬದಿ ನಿಂತು ದಿಟ್ಟಿಸುತ್ತದೆ, ನವಿಲುಗಳು ಗರಿಗೆದರುತ್ತವೆ, ಕೆರೆಕಲ್ಲಿನ ಮೇಲೆ ಆಮೆಗಳು ಬಿಸಿಲು ಕಾಯಿಸುತ್ತವೆ, ಆಗಸದೆತ್ತರದ ಬಿದಿರುಮೆಳೆಗಳಿವೆ, ಮರದಿಂದ ಮರಕ್ಕೆ ಹಾರಾಡುವ ಕೆಂಜಳಿಲುಗಳಿವೆ, ಅತ್ತ ಸ್ವಾದಿಷ್ಠ ಮಳಲಿ ಮೀನಿವೆ, ಆನೆ, ಶಿಂಗಳೀಕ, ಮುಸಿಯ, ಕಡವೆ, ಹುಲಿ, ಮುಳ್ಳುಹಂದಿ, ಬರ್ಕ, ಉಡ, ತಾಟೀನ್ಹಕ್ಕಿ, ಹಾರುವ ಓತಿ, ಮಂಡಲ, ಕಾಳಿಂಗ, ನಾಗರ, ಹಸಿರು ಹಾವು, ಚಿಟ್ಟೆ, ಹದ್ದು, ಗೂಬೆ, ಬಾವಲಿ, ಜೀರುಂಡೆ, ಕಡಜ, ಸಿಕಾಡಾ, ಕಪ್ಪೆ, ಕಾಡುಹಂದಿ, ಕಾಡುಬೆಕ್ಕು, ಅಡ್ಡಡ್ಡ ವಿಚಿತ್ರವಾಗಿ ಚಲಿಸುವ ಏಡಿಗಳಿವೆ, ಮಳೆಗಾಲದ ರುಚಿಕರ ಕಳಿಲೆಯಿದೆ, ಬಿಡುವಿಲ್ಲದೇ ಸುತ್ತುವ ಚಗಳಿ ಇರುವೆ ಇವೆ, ನಮ್ಮಲ್ಲಿ ಅವಿಭಕ್ತ ಕುಟುಂಬಗಳಿವೆ, ನಮ್ಮ ರೈತರು ಕಷ್ಟಜೀವಿಗಳು, ಅನ್ನದಾತರು, ಸ್ವಾವಲಂಬಿಗಳು, ನಮ್ಮಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ, ಜನಜೀವನ ನೈತಿಕತೆಯಿಂದಿದೆ, ಜಗತ್ತಿನ ಅಮೂಲ್ಯ ಹದಿನೆಂಟು ಜೀವವೈವಿಧ್ಯ ತಾಣಗಳಲ್ಲಿ ನಮ್ಮ ಚಾರ್ಮಾಡಿ, ಶಿರಾಡಿ, ಕುದುರೆಮುಖ ಇತ್ಯಾದಿಗಳೂ ಇವೆ, ದಕ್ಷಿಣ ಭಾರತದ ಕೋಟ್ಯಾಂತರ ಜನರಿಗೆ ನಮ್ಮಲ್ಲಿ ಉಗಮವಾಗುವ ನದಿಗಳಿಂದ ನೀರು ಕೊಡುತಿದ್ದೇವೆ.”
ಆದರೆ ಹೀಗೆ ಕೇಳಿಕೊಂಡು ಹೆಮ್ಮೆಪಡುವ ದಿನಗಳು ಅಂತ್ಯ ಕಾಣುವುದು ದೂರವಿಲ್ಲ!
ಇನ್ನು ಇದೇ ರಾಗವನ್ನು ಹಾಡಿದರೆ ನಮ್ಮನ್ನು ಭೂರಿಬಸವ ಎಂದು ಅಪಹಾಸ್ಯ ಮಾಡಲಿದ್ದಾರೆ. ಜೋಪಾನ. ನಮ್ಮ ಕಾಡುಗಳನ್ನು ರಕ್ಷಿಸಲು ಕೂಡಲೇ ಕಾರ್ಯಪ್ರವೃತ್ತರಾಗೋಣ.
ನಮ್ಮ ಕಾಡುಗಳು ನಮ್ಮ ಹೆಮ್ಮೆ.
