ಅಭಿವೃದ್ಧಿಯು ಎಂದೆಂದಿಗೂ ಸಹ ಸಮತೂಕವಾಗಿಯೇ ಇರಬೇಕು. ಇಲ್ಲದಿದ್ದಲ್ಲಿ ಕೆಳಗೆ ಹೇಳಲಾದ ನೀತಿಕಥೆಯಂತೆ ಆಗುವುದು ಕಟ್ಟಿಟ್ಟ ಬುತ್ತಿ!
ರಾಜನೂ! ರಾಜಪಥವೂ!!
ಒಂದು ಊರಿನಲ್ಲಿ ಒಬ್ಬ ರಾಜ ಇದ್ದ, ರಾಜ ಅಂತಿಂಥ ರಾಜನಲ್ಲ. ರಾಜಾಧಿರಾಜ. ಸದಾ ಸುತ್ತುವುದು ಆತನ ಪ್ರಮುಖ ಹವ್ಯಾಸವಾಗಿತ್ತು. ಸುತ್ತಲು ಹೋಗಬೇಕೆಂಬ ಪ್ರದೇಶಗಳೆಲ್ಲಾ ಗುಡ್ಡ-ಗಾಡುಗಳು, ಕಾಡುಗಳು, ಕಾಡುಪ್ರಾಣಿಗಳು. ಇವನ ರಥಗಳಿಗೆ ರಸ್ತೆಯ ಅಗಲ ಸಾಲುತ್ತಿರಲಿಲ್ಲ, ಕುದುರೆಗಳು ಏರು-ತಗ್ಗಾದ ಕಾಲು ದಾರಿಯಲ್ಲಿ ಏದುರಿಸು ಬಿಡುತ್ತಿದ್ದವು. ರಸ್ತೆ ಮಂತ್ರಿಗಳನ್ನು ಕರೆದು ಚರ್ಚೆ ಮಾಡಿದ, ರಸ್ತೆ ಮಂತ್ರಿಗಳದೇ ರಸ್ತೆ ಮಾಡುವ ಕಂಪನಿಯೊಂದಿತ್ತು. ಕೆಲಸವಿಲ್ಲದ ಆ ಕಂಪನಿ ನಷ್ಟದಲ್ಲಿತ್ತು. ರಸ್ತೆ ಮಂತ್ರಿಗಳು ವ್ಯವಹಾರ ಚತುರರೂ ಹಾಗೂ ಚಾಣಾಕ್ಷರೂ ಆಗಿದ್ದರು. ಅವರು ಹೇಳಿದರು, ಜಹಾಪನಾ ನೀವು ಮತ್ತು ನಿಮ್ಮ ವ್ಯವಹಾರಸ್ಥ ಸ್ನೇಹಿತರಿಗೆ ಅನುಕೂಲವಾಗುವಂತೆ ಎಲ್ಲಾ ಕಡೆಗಳಲ್ಲೂ ರಸ್ತೆ ಮಾಡಿಸುತ್ತೇನೆ ಎಂದ, ರಾಜನೂ ಸಂತೋಷದಿಂದ ಅಸ್ತು ಎಂದ. ಎಲ್ಲೆಲ್ಲಿ ರಸ್ತೆ ಮಾಡುವುದು ಚರ್ಚೆ ಶುರುವಾಯಿತು. ರಸ್ತೆ ಮಂತ್ರಿ ಒಂದು ಐಡಿಯಾ ಮಾಡಿದ. ಮಹಾಸ್ವಾಮಿ, ನಿಮಗೂ ನಿಮ್ಮ ವ್ಯವಹಾರಸ್ಥ ಸ್ನೇಹಿತರಿಗೂ ಕೊಂಚವೂ ತೊಂದರೆಯಾಗಬಾರದು ಎಂದರೆ ರಸ್ತೆಗಳ ಉದ್ದದಷ್ಟೇ ಅಗಲವನ್ನೂ ಮಾಡಿದರಾಯಿತು. ರಾಜನ ಒಪ್ಪಿಗೆ ದೊರೆಯಿತು. ಉತ್ತರ ತುದಿಯಿಂದ ದಕ್ಷಿಣದ ಕಡೆಗೆ ಹಾಗೂ ದಕ್ಷಿಣದ ಕಡೆಯಿಂದ ಉತ್ತರ ದಿಕ್ಕಿಗೆ ಮತ್ತು ಪೂರ್ವದ ತುದಿಯಿಂದ ಪಶ್ಚಿಮಕ್ಕೆ ಹಾಗೂ ಪಶ್ಚಿಮದ ತುದಿಯಿಂದ ಪೂರ್ವಕ್ಕೆ ರಸ್ತೆ ಕೆಲಸ ಪ್ರಾರಂಭವಾಗಿಯೇ ಬಿಟ್ಟಿತು. ಜನಗಳ ತೆರಿಗೆ ಹಣವನ್ನು ರಾಜಪಥದ ನಿರ್ಮಾಣಕ್ಕೆ ಮೀಸಲಾಗಿಡಬೇಕು ಎಂಬ ಸುಗ್ರೀವಾಜ್ಞೆಯು ಹೊರಟಿತು.
ರಾಜಭಕ್ತರಿಗೋ ಖುಷಿ, ನಮ್ಮ ರಾಜ್ಯ ಅಭಿವೃದ್ದಿಯಾಗುತ್ತಿದೆ. ಎಲ್ಲೆಲ್ಲೂ ರಸ್ತೆ, ಯಾವ ರಸ್ತೆಯಲ್ಲೂ ಹೋದರು ಯಾವ ಊರಿಗಾದರೂ ಹೋಗಬಹುದು! ಆಹಾ!! ನಮ್ಮ ರಾಜರೆಂದರೆ ಏನಂತ ತಿಳಿದಿರಿ. ಅತ್ತ ರಸ್ತೆ ಕಾಮಗಾರಿ ನಡೆಯುತ್ತಿದ್ದಂತೆ, ಹೊಲಗಳು, ಮನೆ-ಮಠಗಳು, ಕಾಡು ಪ್ರದೇಶಗಳು ನೆಲಸಮವಾದವು. ಜನಗಳು ನೆಲೆಯಿಲ್ಲದೇ ಅನಿವಾರ್ಯವಾಗಿ ಬೇರೆ ರಾಜ್ಯಕ್ಕೆ ವಲಸೆ ಹೋದರು. ಸೈನಿಕರಿಗೆ ಹಗಲೂ ರಾತ್ರಿ ರಸ್ತೆ ಮಾಡುವುದೇ ಕೆಲಸ. ರಸ್ತೆ ರಾಜಭವನದ ಹತ್ತಿರ ಬಂತು. ರಾಜಾಜ್ಞೆಯಂತೆ ರಾಜಭವನವೂ ನೆಲಸಮವಾಗಬೇಕು. ಆದರೆ ರಾಜನಿದ್ದಾನಲ್ಲ. ತಾಂತ್ರಿಕ ಅಡಚಣೆಯಾಯಿತು.
ಇಷ್ಟರಲ್ಲೇ ಆಹಾರ ಧಾನ್ಯ ಬೆಳೆಯುವ ರೈತರು ಹೊಲ ಕಳೆದುಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದರು. ಕಾಡುನಾಶದಿಂದಾಗಿ ಮಳೆ ತನ್ನ ದಿಕ್ಕು ಬದಲಿಸಿತ್ತು. ರಾಜ್ಯದಲ್ಲಿ ಒಂದೇ ಬಾರಿಗೆ ಕ್ಷಾಮ ತಲೆದೂರಿತು. ಕುಡಿಯಲು ನೀರಿಲ್ಲ. ಸೈನಿಕರ ಹೊಟ್ಟೆ ತುಂಬಲು ದವಸ ಧಾನ್ಯಗಳಿಲ್ಲ, ಸಂಕಷ್ಟಗಳು ಒಂದೇ-ಎರಡೇ? ಖುದ್ದು ರಾಜಭವನದಲ್ಲೇ ಕುಡಿಯಲು ನೀರಿಲ್ಲ, ಉಣ್ಣಲು ಕೂಳಿಲ್ಲ.
ಸೂರು-ಹೊಲ ಕಳೆದುಕೊಂಡ ವೃದ್ಧರು, ಊರು ಬಿಡಲಾರದ ಅಸಹಾಯಕರು, ಕೂಳು-ನೀರಿಲ್ಲದೆ ಸೊರಗಿದರು, ಚಾಣಾಕ್ಷ ರಸ್ತೆ ಮಂತ್ರಿ ಪ್ರವಾಸದ ನೆವದಲ್ಲಿ ರಾಜ್ಯ ಬಿಟ್ಟು ಹೋಗಿದ್ದ. ಖಜಾನೆ ಬರಿದಾಗಿತ್ತು. ರಾಜನ ವ್ಯವಹಾರಸ್ಥ ಸ್ನೇಹಿತರು ರಾಜನಿಗೊಂದು ಮನೆಯನ್ನು ಬೇರೆ ರಾಜ್ಯದಲ್ಲಿ ಕಟ್ಟಿಕೊಟ್ಟರು. ಅಲ್ಲಿ ಹೋಗಿ ನೆಲೆಸಿದ ರಾಜನೀಗ ಆ ರಾಜ್ಯದ ಸಾಮಂತ. ವ್ಯವಹಾರಸ್ಥ ಸ್ನೇಹಿತರು ಕೊಟ್ಟರೆ ಊಟ, ಇಲ್ಲವಾದಲ್ಲಿ ಇಲ್ಲ. ಅವರ ಮರ್ಜಿಯಲ್ಲಿ ಜೀವ ತೇಯುವ ರಾಜನಿಗೆ ಕಣ್ಣುಮುಚ್ಚಿದರೆ ಸಾಕು, ರಸ್ತೆಯದೇ ರೂಪ ಕನಸಲ್ಲಿ ಬರುತ್ತದೆ. ಈಗ ಆ ರಾಜ್ಯದಲ್ಲಿ ಕೊಳೆತು ಹೋಗುತ್ತಿರುವವ ಹೆಣಗಳನ್ನು ತಿನ್ನಲು ನಾಯಿ-ನರಿಗಳೂ ಇಲ್ಲ. ಹದ್ದು ಕಿರುಬಗಳೂ ಇಲ್ಲ. ರಾಜಪಥಕ್ಕಾಗಿ ಅಳಿದ ರಾಜ್ಯದ ದುರಂತ ಕತೆಯಿದು.
(ಈ ಕಥೆಯನ್ನು ಕಾಲ್ಪನಿಕ ನೆಲೆಗಟ್ಟಿನಲ್ಲಿ ಹೆಣೆದಿದ್ದು, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಕುರಿತಾಗಿ ಅಲ್ಲ. ಆಕಸ್ಮಿಕವಾಗಿ ಯಾರಿಗಾದರೂ ಈ ಕತೆ ಹೋಲಿಕೆಯಾದಲ್ಲಿ, ಬರೆದವರು ಜವಾಬ್ದಾರರಲ್ಲ ಎಂಬ ಅಫಿಡೆವಿಟ್)
ಅತಿಥಿ ಲೇಖಕರು: ಅಖಿಲೇಶ್ ಚಿಪ್ಪಳಿ
