ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ಚಂದಾ ಅವರು ೨೦೧೮ರ ನವೆಂಬರ್ ೪ ರಿಂದ ಅನಿರ್ದಿಷ್ಟ ಕಾಲ ರಜೆ ತೆಗೆದುಕೊಳ್ಳುವಂತೆ ಐಸಿಐಸಿಐ ಬ್ಯಾಂಕ್‌ನ ಅಡಳಿತ ಮಂಡಳಿಯು ಅಗ್ರಹಪಡಿಸಿತು. ಸಿಬಿಐ ತನ್ನ ತನಿಖೆಯಲ್ಲಿ ಚಂದಾ ಮತ್ತು ಪತಿ ದೀಪಕ್ ಕೊಚ್ಚಾರ್ ವೀಡಿಯೊಕಾನ್ ಸಾಲ ಹಗರಣದಲ್ಲಿ ತಪ್ಪಿತಸ್ಥರು ಎಂದು ವರದಿ ಸಲ್ಲಿಸಿತು.
ನಿವೃತ್ತ ನ್ಯಾಯಾಧೀಶ ಬಿ ಎನ್ ಶ್ರೀಕೃಷ್ಣ ಆಯೋಗವು ತನಿಖೆ ಮಾಡಿ ಸಲ್ಲಿಸಿದ ವರದಿಯಲ್ಲಿ ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಶಿಷ್ಟಾಚಾರ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ವರದಿ ಸಲ್ಲಿಸಿತು. ಇದರ ಫಲವಾಗಿ ಚಂದಾ ಕೊಚ್ಚಾರ್ ಅವರನ್ನು ವಜಾ ಮಾಡಲಾಯಿತು.

ಚಂದಾ ಕೊಚ್ಚಾರ್
ಚಂದಾ ಕೊಚ್ಚಾರ್ ಹಿನ್ನೆಲೆ
ದಿನಾಂಕ ೧೭/೧೧/೧೯೬೧ರಂದು ಜೋಧಪುರದಲ್ಲಿ ಜನಿಸಿದ ಚಂದಾ ಕೊಚ್ಚಾರ್, ಜೈಪುರದ ಸೇಂಟ್ ಆಂಜೆಲಾ ಸೊಫಿಯಾ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಮುಂಬಯಿಯಲ್ಲಿ ಬಿ. ಕಾಂ ವ್ಯಾಸಂಗ ಮಾಡಿ ಅಲ್ಲಿನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ನಂತರ ವೆಚ್ಚಲೆಕ್ಕ ಶಾಸ್ತ್ರ ಅಧ್ಯಯನ ಮಾಡಿ ಅದರಲ್ಲಿ ಜೆ ಎನ್ ಬೊಸ್ ಸ್ಮಾರಕ ಚಿನ್ನದ ಪದಕ ಗಳಿಸಿದರು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಸಹ ಗಳಿಸಿದರು.
ಐಸಿಐಸಿಐ ಸೇರ್ಪಡೆ ಮತ್ತು ಉತ್ತುಂಗ
ಚಂದಾ ಕೊಚ್ಚಾರ್ ಅವರು ೧೯೮೪ರಲ್ಲಿ ಐಸಿಐಸಿಐ ಸಂಸ್ಥೆಗೆ ಆಡಳಿತಾತ್ಮಕ ತರಬೇತಿಗಾಗಿ ಸೇರಿದರು. ೧೯೯೦ರ ದಶಕದಲ್ಲಿ ಐಸಿಐಸಿಐ ಬ್ಯಾಂಕ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಐಸಿಐಸಿಐ ಬ್ಯಾಂಕ್ ತ್ವರಿತ ವೇಗದಲ್ಲಿ ಭಾರತದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದು ಎಂದೆನಿಸಿಕೊಳ್ಳಲು ಕಾರಣರಾದರು. ತಮ್ಮ ಪರಿಶ್ರಮ ಮತ್ತು ಐಸಿಐಸಿಐ ಬ್ಯಾಂಕ್-ಸಂಬಂಧಿತ ಹುದ್ದೆಗಳಲ್ಲಿ ಮಾಡಿದ ಸಾಧನೆಗಳ ಫಲವಾಗಿ ಚಂದಾ ಕೊಚ್ಚಾರ್ ೨೦೦೯ರಲ್ಲಿ ವ್ಯವಸ್ಥಾಪಕಿ-ನಿರ್ದೇಶಕಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಿದ ಭಾರತ ಸರ್ಕಾರ ೨೦೧೧ರಲ್ಲಿ ಚಂದಾ ಕೊಚ್ಚಾರ್‌ರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿತು.
ಪತನ
ಚಂದಾ ಕೊಚ್ಚಾರ್‌ರಿಗೆ ಮೊದಲ ಬಾರಿಗೆ ಸಂಕಷ್ಟ ಎದುರಾದದ್ದು ೨೦೧೬ರಲ್ಲಿ. ವೀಡಿಯೊಕಾನ್ ಷೇರುದಾರರೊಬ್ಬರರು ಹಿತಾಸಕ್ತಿ ಘರ್ಷಣೆಯ ವಿಚಾರ ಮುಂದಿಟ್ಟರು. ಏಕೆಂದರೆ ಚಂದಾ ಮತ್ತು ಅವರ ಪತಿ ದೀಪಕ್ ಕೊಚ್ಚಾರ್ ಸಂಸ್ಥೆಯೊಂದರಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿತ್ತು. ಐಸಿಯಸಿಐ ವ್ಯವಸ್ಥಾಪಕ ಮಂಡಳಿಯು ಸಾಲ ಅನುಮೋದನಾ ಪ್ರಕ್ರಿಯೆಗಳನ್ನು ಪರಿಶೀಲಿಸಿ ಎಲ್ಲವೂ ಸರಿಯಿದೆಯೆಂದು ತೀರ್ಮಾನಿಸಿತು.
ಸಾಲದ ವಿಚಾರದಲ್ಲಿ ವೀಡಿಯೊಕಾನ್ ಉದ್ದಿಮೆಗೆ ನಿಮಯಬಾಹಿರ ಪಕ್ಷಪಾತ ತೋರುತ್ತಿದ್ದರೆಂದು ಚಂದಾ ಕೊಚ್ಚಾರ್ ವಿರುದ್ಧ ಆರೋಪಗಳು ಪುನಃ ಎದುರಾಯಿತು. ಐಸಿಐಸಿಐ ಮಂಡಳಿಯು ನಿವೃತ್ತ ನ್ಯಾಯಾಧೀಶ ಬಿ ಎನ್ ಶ್ರೀಕೃಷ್ಣ ನೇತೃತ್ವದ ಸ್ವತಂತ್ರ ಆಯೋಗಕ್ಕೆ ವಿಚಾರಣೆ ಮಾಡಲು ಹೇಳಿತು. ಚಂದಾ ಕೊಚ್ಚಾರ್ ಅವರ ಪತಿ ದೀಪಕ್ ಕೊಚ್ಚಾರ್ ಲಂಚ ಪಡೆದು ವೀಡಿಯೊಕಾನ್ ಉದ್ದಿಮೆಗೆ ಸಾಲಗಳನ್ನು ನೀಡುತ್ತಿದ್ದದ್ದು ವಿಚಾರಣೆಯ ವರದಿಯಲ್ಲಿ ತಿಳಿದುಬಂದಿತು. ಸಿಬಿಐ ಇವರ ವಿರುದ್ಧ ಸೆಕ್ಷನ್ ೪೨೦ ಅಡಿ ಕೇಸು ದಾಖಲಿಸಿತು. ಇದರ ಹಿನ್ನೆಲೆಯಲ್ಲಿ ಐಸಿಐಸಿ ವ್ಯವಸ್ಥಾಪಕ ಮಂಡಳಿಯು ಚಂದಾ ಕೊಚ್ಚಾರ್‌ರನ್ನು ಎಂಡಿ-ಸಿಇಒ ಹುದ್ದೆಯಿಂದ ವಜಾ ಮಾಡಿತು. ಇದಕ್ಕೆ ಪ್ರತಿಕ್ರಿಯಿಸಿದ ಚಂದಾ ಕೊಚ್ಚಾರ್, “ಸಾಲ ನೀಡುವ ನಿರ್ಧಾರ ನನ್ನೊಬಳದೇ ಅಲ್ಲ, ಐಸಿಐಸಿಐ ವ್ಯವಸ್ಥಾಪಕ ಮಂಡಳಿಯವರೂ ಸಹ ಭಾಗಿಯಾಗಿದ್ದಾರೆ. ನನಗೆ ಆಘಾತ ಮತ್ತು ಬೇಸರವಾಗಿದೆ” ಎಂದರು.
