ಭೂಮಿಯನ್ನು ಹಸಿರುಗೊಳಿಸುವ ಅಭಿಯಾನದಲ್ಲಿ ಭಾರತ ಮತ್ತು ಚೀನಾ ಉಳಿದೆಲ್ಲ ದೇಶಗಳಿಗಿಂತಲೂ ಮುಂದಿವೆ ಎಂದು ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ತಾನು ಫೆಬ್ರುವರಿ ೧೧ರಂದು ಪ್ರಕಟಿಸಿದ ವರದಿಯಲ್ಲಿ ತಿಳಿಸಿದೆ.
೨೦ ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪ್ರಪಂಚವು ಈಗ ಹೆಚ್ಚು ಹಸಿರಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇದು ಪರಿಸರವಾದಿಗಳಿಗೆ ಸಿಹಿ ಸುದ್ದಿಯಾಗಲಿದೆ.
ಬೊಸ್ಟನ್ ವಿಶ್ವವಿದ್ಯಾಲಯ ಹಾಗೂ ನಾಸಾದ ಎಮ್ಸ್ ಸಂಶೋಧನಾ ಕೇಂದ್ರವ ವಿಜ್ಞಾನಿಗಳು ಈ ಅಧ್ಯಯನ ಮಾಡಿದರು. ಭೂಮಿಯ ಸುತ್ತಲೂ ಸುತ್ತುತ್ತಿರುವ ನಾಸಾದ ಎರಡು ಉಪಗ್ರಹಗಳಲ್ಲಿ ಅಳವಡಿಸಲಾದ “ಮೊಡಿಸ್” ಉಪಕರಣವು ಇಪ್ಪತ್ತು ವರ್ಷಗಳ ಕಾಲಾವಧಿಯಲ್ಲಿ ಮಾಹಿತಿಯನ್ನು ಕಲೆಹಾಕಿತ್ತು. ಅಧ್ಯಯನವು ಈ ಮಾಹಿತಿಯನ್ನು ಅವಲಂಬಿಸಿತ್ತು. ಈ ವರದಿಯನ್ನು Nature Sustainability ಎಂಬ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
ಭಾರತ ಮತ್ತು ಚೀನಾ ದೇಶಗಳಲ್ಲಿ ಮರ ನೆಡುವಿಕೆ ಕಾರ್ಯಕ್ರಮಗಳು ಹಾಗೂ ಕೃಷಿಯ ಕಾರಣ ಹಸಿರುಗೊಳಿಸುವಿಕೆ ಹೆಚ್ಚಾಗುತ್ತಿದೆ ಎಂದು ಈ ಅಧ್ಯಯನವು ವಿವರಿಸುತ್ತದೆ.
ಅಲ್ಲದೆ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ಜನರು ಮನಗಂಡಿದ್ದು, ಪರಿಸರವಾದಿಗಳು ಹಾಗೂ ಇತರೆ ಜನರು ಗಿಡ-ಮರ-ಕಾಡು ಸಂರಕ್ಷಣೆಯ ಮಹತ್ವ ಅರಿತಿದ್ದಾರೆ. ಕಾಡುಗಳ ಸಂರಕ್ಷಣೆಯತ್ತ ಕಾರ್ಯೋನ್ಮುಖರಾಗುತ್ತಿದ್ದಾರೆ. ಭಾರತವು ನಿಧಾನವಾಗಿ ಸ್ವಚ್ಛ ಇಂಧನದತ್ತ ವಲಸೆ ಹೋಗುತ್ತಿದ್ದು, ಸೌರ ಶಕ್ತಿ ಹಾಗೂ ಪವನ ಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸತೊಡಗಿದೆ. ಇದೂ ಸಹ ಪರಿಸರ ಸಂರಕ್ಷಣೆಯ ಒಂದು ಆಯಾಮ ಎಂದು ಈ ಅಧ್ಯಯನವು ಹೇಳುತ್ತದೆ.
