ಜನರಿಗೆ ಮೋಸ ಮಾಡುವ ಉದ್ದೇಶದಿಂದ, ಕೆಲವು ಮೋಸಗಾರರು ಭಾರತೀಯ ದೂತಾವಾಸದ ದೂರವಾಣಿ ಸಂಖ್ಯೆಯನ್ನು ನಕಲು ಮಾಡಿ ಕರೆ ಮಾಡುತ್ತಿರುವುದು ಭಾರತೀಯ ದೂತಾವಾಸದ ಗಮನಕ್ಕೆ ಬಂದಿದೆ. ಇಂತಹ ಕರೆಗಳ ಪೈಕಿ ಕೆಲವು ರಾಯಭಾರ ದೂರವಾಣಿ ಸಂಖ್ಯೆ (+ 973-17560360) ಎಂದು ತೋರಿಸಲಾಗಿದೆ, ಮತ್ತು ಇನ್ನೂ ಕೆಲವು ಕೇವಲ ರಾಯಭಾರ ಗುರುತನ್ನು ಬಳಸುತ್ತವೆ. ಈ ಮೋಸಗಾರರು ಭಾರತೀಯರಿಗೆ ಕರೆ ಮಾಡಿ, “ನಿಮ್ಮ ಪಾಸ್ಪೋರ್ಟ್, ವೀಸಾ ಪತ್ರಗಳು, ವಲಸೆ ಪತ್ರ (ಇತ್ಯಾದಿ) ಗಳಲ್ಲಿ ದೋಷಗಳು ಕಂಡುಬಂದಿವೆ. ನೀವು ಹಣ ಪಾವತಿಸಿ ಇವನ್ನು ಸರಿ ಮಾಡಿಸಬಹುದು. ಈ ದೋಷಗಳನ್ನು ಸರಿಪಡಿಸದಿದ್ದಲ್ಲಿ, ನಿಮ್ಮನ್ನು ಬಾರತಕ್ಕೆ ಗಡೀಪಾರು ಮಾಡಬಹುದು, ಅಥವಾ ಬಹರೇನ್‌ನಲ್ಲೇ ಜೈಲು ಶಿಕ್ಷೆಗೆ ಗುರಿಪಡಿಸಬಹುದು” ಎಂದು ಹೇಳಿ ಕ್ರೆಡಿಟ್ ಕಾರ್ಡ್ ವಿವರಗಳ ಮಾಹಿತಿ ತೆಗೆದುಕೊಳ್ಳಲು ಹವಣಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ತಮಗೆ ಭಾರತೀಯ ದೂತಾವಾಸ ಅಥವಾ ಭಾರತದ ಇತರೆ ಅಧಿಕಾರಿಗಳಿಂದ ಇಂತಹ ಮಾಹಿತಿ ಬಂದಿದೆ ಎಂದು ಸುಳ್ಳು ಹೇಳಿರುವುದೂ ಉಂಟು. ವೀಸಾ ಅರ್ಜಿದಾರರಿಗೂ ಸಹ “ದೂತಾವಾಸದಿಂದ ಎನ್ನಲಾದ” ಇಂತಹ ಕರೆಗಳು ಬಂದಿರುವುದುಂಟು.
ವೈಯಕ್ತಿಕ ಮಾಹಿತಿಯನ್ನು ಪಡೆದುಕೊಳ್ಳಲು ಭಾರತೀಯರು ಅಥವಾ ವಿದೇಶೀಯರಿಗೆ ದೂತಾವಾಸದಿಂದ ಅಧಿಕಾರಿಗಳು ಯಾವುದೇ ರೀತಿಯ ಕರೆ ಮಾಡುವುದಿಲ್ಲ ಎಂದು ದೂತಾವಾಸವು ಖಚಿತಪಡಿಸುತ್ತದೆ. ಅರ್ಜಿದಾರರಿಂದ ಅಕಸ್ಮಾತ್ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿದ್ದಲ್ಲಿ, ಅಂತಹ ಅರ್ಜಿದಾರರಿಗೆ @mea.gov.in ಇ-ಮೇಲ್ ಡೊಮೇನ್ ಇಂದ ಬರುವಂತಹ ಮಿಂಚೆಗಳ (ಇ-ಮೇಲ್) ಮೂಲಕ ಮಾತ್ರ ತಿಳಿಯಪಡಿಸಲಾಗುವುದು.
ಸಾರ್ವಜನಿಕರು “ಭಾರತೀಯ ದೂತಾವಾಸದಿಂದ” ಎಂದು ಹೇಳಿಕೊಂಡು ಬಂದ ಯಾವುದೇ ಅನುಮಾನಾಸ್ಪದ ಕರೆಗಳನ್ನು ಪರಿಗಣಿಸಬಾರದು ಎಂದು ಭಾರತೀಯ ದೂತಾವಾಸವು ಸಲಹೆ ನೀಡುತ್ತದೆ. ಇಂತಹ ಕರೆಗಳಲ್ಲಿ ಸೂಚಿಸಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಬಾರದು ಹಾಗೂ ಹಣ ವರ್ಗಾಯಿಸಬಾರದು ಎಂದು ಭಾರತೀಯ ದೂತಾವಾಸವು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತದೆ. ಸಾರ್ವಜನಿಕರು ಇಂತಹ ಯಾವುದೇ ಪ್ರಕರಣಗಳನ್ನು ಈ ಇಮೇಲ್ ವಿಳಾಸಗಳಿಗೆ ಬರೆಯುವ ಮೂಲಕ ದೂತಾವಾಸದ ಗಮನಕ್ಕೆ ತರತಕ್ಕದ್ದು: [email protected] , [email protected].
ಅಂತರರಾಷ್ಟ್ರೀಯ ಸುದ್ದಿ ಕೇಂದ್ರ, ಬಹರೇನ್
ಸಿಸೆಲ್ ಪನಯಿಲ್ ಸೋಮನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ – ಮಧ್ಯಪ್ರಾಚ್ಯ ವಲಯ, ಬಹರೇನ್
