ಕೇಂದ್ರದಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್, ಪುಲ್ವಾಮಾದ ಭಯೋತ್ಪಾದಕ ಕೃತ್ಯಕ್ಕೆ ಪಾಕಿಸ್ತಾನದ ಗೂಢಚಾರಿ ಸಂಸ್ಥೆ ಐಎಸ್‌ಐ ಕಾರಣ ಎಂದು ಹೇಳಿಕೆ ನೀಡಿದೆ.
“ಐಎಸ್‌ಐ ಭಯೋತ್ಪಾದನೆಯ ವಿನ್ಯಾಸಕ ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ರಕ್ಷಕ. ಮಸೂದ್ ಅಜರ್ ಐಎಸ್‌ಐಯ ರಕ್ಷಣೆಯಲ್ಲಿದ್ದಾನೆ. ಫೆಬ್ರುವರಿ ೧೪ರಂದು ನಡೆದ ಪಾಕಿಸ್ತಾನಿ ಭಯೋತ್ಪಾದನಾ ಕೃತ್ಯಕ್ಕೆ ಜೈಷ್-ಎ-ಮೊಹಮ್ಮದ್ ಹೊಣೆಗಾರಿಕೆ ಒಪ್ಪಿಕೊಂಡಿದೆ. ಹಾಗಾಗಿ, ಭಯೋತ್ಪಾದನೆಯ ವಿನ್ಯಾಸಕ ಪಾಕಿಸ್ತಾನದಲ್ಲಿದ್ದು ಭಯೋತ್ಪಾದಕ ಹಲ್ಲೆಗಳನ್ನು ಬೆಂಬಲಿಸುತ್ತಿದ್ದರೆ, ಇದಕ್ಕೆಲ್ಲ ಯಾರು ಹೊಣೆ ಎಂಬುದು ನಮಗೆ ಗೊತ್ತಿದೆ” ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ತಿಳಿಸಿದರು.
ಫೆಬ್ರುವರಿ ೧೪ರಂದು ಅಪರಾಹ್ನ ಸುಮಾರು ೩:೧೫ರ ಹಾಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ೨,೫೦೦ ಮಂದಿ ಸಿಆರ್‌ಪಿಎಫ್‌ನ ಸೈನಿಕರು ೭೮ ಬಸ್ಸುಗಳಲ್ಲಿ ಪಯಣಿಸುತ್ತಿದ್ದರು. ಆಗ ಪುಲ್ವಾಮದ ಲಧು ಮೋದಿ ಲೇತ್ಪೊರಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕನೊಬ್ಬ ಆತ್ಮಾಹುತಿ ಧಾಳಿಯಲ್ಲಿ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಈ ಬಸ್ಸುಗಳಿಗೆ ಗುದ್ದಿದ. ಇದರ ಪರಿಣಾಮವಾಗಿ ೪೦ಕ್ಕೂ ಹೆಚ್ಚು ಮಂದಿ ಸೈನಿಕರು ಹುತಾತ್ಮರಾದರು.
ಭಯೋತ್ಪಾದಕ ಕೃತ್ಯ ನಡೆದ ಕೆಲ ಸಮಯದ ನಂತರ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಜೈಷ್-ಎ-ಮೊಹಮ್ಮದ್ ಹೊಣೆಗಾರಿಕೆ ಒಪ್ಪಿಕೊಂಡಿತು.
ಈ ಹಿನ್ನೆಲೆಯಲ್ಲಿ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಅಮೆರಿಕಾ ಸೇರಿದಂತೆ ಹಲವಾರು ರಾಷ್ಟ್ರಗಳು ಪಾಕಿಸ್ತಾನಕ್ಕೆ ಆಗ್ರಹಿಸಿದವು. ಆದರೆ ಪಾಕಿಸ್ತಾನಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ “ಸಾಕ್ಷ್ಯ ಒದಗಿಸಿ, ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿ ಬೇಜವಾಬ್ದಾರಿ ಮೆರೆದಿದ್ದಾರೆ.