ಒಮ್ಮೆಗೆ ಸುಮಾರು ೫೦೦ರಿಂದ ೮೫೦ ಜನರನ್ನು ಹೊತ್ತೊಯ್ಯಬಲ್ಲ ಬೃಹತ್ ಗಾತ್ರದ ಎ೩೮೦ ಡಬಲ್ ಡೆಕರ್ ವಿಮಾನದ ಉತ್ಪಾದನೆಯನ್ನು ತಾನು ಸ್ಥಗಿತಗೊಳಿಸುವ ಇಂಗಿತವನ್ನು ಫ್ರಾನ್ಸ್‌ನ ವಿಮಾನ ತಯಾರಕ ಏರ್ಬಸ್ ಎಸ್‌ಇ ಗುರುವಾರ ತಿಳಿಸಿತು.
ಇತ್ತೀಚಿನ ವರ್ಷಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ಜಾಗ ಸಾಲದ ಕಾರಣ, ವಿಮಾನಯಾನ ಸಂಸ್ಥೆಗಳು ಚಿಕ್ಕ ಗಾತ್ರದ ವಿಮಾನಗಳನ್ನು ಕೊಳ್ಳಲು ನಿರ್ಧರಿಸಿದವು. ಈ ಕಾರಣ, ಏರ್ಬಸ್ ಏ೩೮೦ ಉತ್ಪನ್ನವನ್ನು ಕಡಿಮೆಗೊಳಿಸಬೇಕಾಯಿತು.
“ಇಂದಿನ ಘೋಷಣೆಯು ನಮಗೆ ಹಾಗೂ ಎ೩೮೦ ಸಮುದಾಯದವರಿಗೆ, ಅಭಿಮಾನಿಗಳಿಗೆ ತುಂಬ ನೋವಿನ ವಿಚಾರ. ಈ ವಿಮಾನವು ಅತ್ಯುತ್ತಮ ತಂತ್ರಜ್ಞಾನದ ಸಾಧನೆಯ ಉತ್ಪನ್ನ. ಬಹಳಷ್ಟು ಜನರು ಇದರಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಮುಂಬರುವ ಹಲವು ವರ್ಷಗಳ ಕಾಲ ಎ೩೮೦ ಆಕಾಶದಲ್ಲಿ ಹಾರಾಡಲಿದೆ. ನಾವು ಈ ವಿಮಾನದ ದುರಸ್ತಿ ಮತ್ತು ಇತರೆ ಸೇವೆ ಒದಗಿಸುವುದನ್ನು ಖಂಡಿತವಾಗಿಯೂ ಮುಂದುವರೆಸುವೆವು” ಎಂದು ಏರ್ಬಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಎಂಡರ್ಸ್ ಹೇಳಿದರು.
ಎಮಿರೇಟ್ಸ್ ಹಾಗೂ ಇತರೆ ದೊಡ್ಡ ಗ್ರಾಹಕರು ಕೊನೆಯ ಆರ್ಡರ್ ಮೂಲಕ ತಮ್ಮ ಎ೩೮೦ ವಿಮಾನಗಳನ್ನು ಪಡೆದ ನಂತರ, ಏರ್ಬಸ್ ೨೦೨೧ರಲ್ಲಿ ಈ ವಿಮಾನದ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಎಮಿರೇಟ್ಸ್ ಮುಂಚೆ ೫೩ ಎ೩೮೦ ವಿಮಾನಗಳಿಗಾಗಿ ಆರ್ಡರ್ ಸಲ್ಲಿಸಿದ್ದು, ಈಗ ಅದನ್ನು ೧೪ಕ್ಕೆ ಇಳಿಸಿದೆ. ಜೊತೆಗೆ ಏರ್ಬಸ್‌ನದೇ ಬೇರೆ ನಮೂನೆಯ ವಿಮಾನಗಳಿಗಾಗಿ ಆರ್ಡರ್ ಸಲ್ಲಿಸಲಿದೆ.
