ಕನ್ನಡ

ಪ್ರವಾಸೋದ್ಯಮ ಮತ್ತು ಪರದೇಸೀಯರ ನಡುವೆ ಕಳೆದುಹೋಗುತ್ತಿರುವ ಮಲೆನಾಡಿಗರು

ಪ್ರವಾಸೋದ್ಯಮ ಮತ್ತು ಪರದೇಸೀಯರ ನಡುವೆ ಕಳೆದುಹೋಗುತ್ತಿರುವ ಮಲೆನಾಡಿಗರು

ಭಯಂಕರ ಚಳಿ. ಬಿಟ್ಟೂ ಬಿಡದೇ ಕಾಡುತ್ತಿರುವ ಚಳಿಗೊಂದು ಗತಿಕಾಣಿಸುವ ಸಲುವಾಗಿ ಎಲ್ಲಿಯಾದರೂ ಕಾಡು ಬೀಳುವ ಆಲೋಚನೆಯಿಂದ ನಮ್ಮ ಖಾಯಂ ದಿಕ್ಪಾಲಕರಿಗೆ ಕರೆ ಮಾಡಿ ‘ನಿಮ್ಮೂರ್ ಗುಡ್ಡ ಹತ್ತನೇನಾ ಬರ್ತಿನಿ’ ಅಂದೆ. “ಯಂತ ಸಾವು ಗುಡ್ಡ ಹತ್ತದು ಮಾರ್ರೆ ಎಲ್ ನೋಡಿದ್ರೂ ಜಾತ್ರೆ ಆಗ್ಯದೆ ಬರೀ ಟೂರಿಸ್ಟುಗಳ್ದೇ ಕಾಟ, ಆ ಗೊತ್ತಿಲ್ದರ್ ಮಧ್ಯ ಹೋದ್ರೆ ನಾವೇ ಬ್ಯಾರೆ ಊರಿಗ್ ಬಂದಿವೇನಾ ಅನ್ನಿಸ್ತದೆ ಸಾಯ್ಲಿ ಅತ್ಲಗೆ” ಎನ್ನುವ ಉತ್ತರ ಬಂತು.

ಜನಗಳಿಂದ ತಲೆತಪ್ಪಿಸಿಕೊಂಡು ಹೋಗುವ ಯೋಚನೆಯಲ್ಲಿದ್ದ ನನಗೆ ಮತ್ತದೇ ಗಿಜಿಗಿಟ್ಟುವ ಕೂಪಕ್ಕೆ ಹೋಗಿಬೀಳುವ ಕರ್ಮ ಯಾತಕ್ಕೆ ಎಂದುಕೊಂಡು ಮನೆ ಬಳಿಯೇ ತೆಪ್ಪಗೆ ಬಿಸಿಲು ಕಾಯಿಸುತ್ತಾ ಕುಳಿತುಕೊಂಡೆ.

ನಿಜಕ್ಕೂ ಮಲೆನಾಡಿಗರು ಪರದೇಸೀ ಜನರ ನಡುವೆ ಕಳೆದುಹೋಗುತ್ತಿದ್ದಾರೆ, ಇವತ್ತು ಸಣ್ಣ ಸಣ್ಣ ಹಳ್ಳಿಗಳು ಪ್ರವಾಸಿ ತಾಣದ ಹೆಸರಿನಲ್ಲಿ ತನ್ನ ಖಾಸಗಿತನವನ್ನು ಕಳೆದುಕೊಂಡು ಅಪರಿಚಿತ ಜನಸಮೂಹದ ನಡುವೆ ನರಳುತ್ತಿದೆ.

ನಿರುಮ್ಮಳವಾಗಿ ತಣ್ಣಗೆ ಹರಿದುಹೋಗುತ್ತಿದ್ದ ಊರಿನಾಚೆಗಿನ ಸಣ್ಣ ಜಲಪಾತ, ಸೋಮಾರಿ ಹೆಬ್ಬಾವಿನಂತೆ ತನ್ನ ಪಾಡಿಗೆ ಭಿಮ್ಮನೆ ಬಿದ್ದುಕೊಂಡಿದ್ದ ಊರಿನ ನೆತ್ತಿಯ ಮೇಲಿನ ಗುಡ್ಡ, ಒಂದ್ನಾಲ್ಕು ಜಾತಿಯ ಪ್ರಾಣಿಗಳನ್ನು, ಒಂದಿಪ್ಪತ್ತನಾಲ್ಕು ಜಾತಿಯ ಹಕ್ಕಿಗಳನ್ನು ಒಡಲಿನಲ್ಲಿಟ್ಟುಕೊಂಡು ಮುಗುಮ್ಮಾಗಿ ಕುಳಿತಿದ್ದ ಕಾಡು  ಎಲ್ಲವೂ ನೆಮ್ಮದಿ ಕಳೆದುಕೊಂಡಿವೆ. ಯಾವ ಗುಡ್ಡಕ್ಕೆ ಕಾಲಿಟ್ಟರೂ ಜನಜಂಗುಳಿ, ಗುಡ್ಡದ ಬುಡಕ್ಕೆ ಬಂದು ಬೋರ್ಗರೆಯುವ ಬೈಕುಗಳು, ಕಾರುಗಳು, ರಾಶಿಗಟ್ಟಲೆ ಪ್ಲಾಸ್ಟಿಕ್ಕುಗಳು, ಬಾಟಲಿಗಳು. ನೀರಿನೊಳಗೆ ಕಾಲಿಡಲೇ ಭಯವಾಗುವಂತೆ ಒಡೆದುಕೊಂಡು ಬಿದ್ದಿರುವ ಬಾಟಲುಗಳು, ಪ್ರವಾಸಿಗರೆಂಬ ಹಣೆಪಟ್ಟಿ ಹೊತ್ತ ಕೆಲವು ವಿಕೃತಜೀವಿಗಳ ಅಬ್ಬರಕ್ಕೆ ಬೆದರಿಹೋದ ಕಾಡು ಮತ್ತದರ ಮಕ್ಕಳು.

ಇವತ್ತು ಮಲೆನಾಡಿನ ಬಹುತೇಕ ಯಾವ ಊರೂ ಖಾಸಗಿಯಾಗುಳಿದಿಲ್ಲ, ಉಳಿದಿದೆ ಅಂದರೆ ಅಲ್ಲೊಂದು ಹೋಮ್ ಸ್ಟೇ ಪ್ರಾರಂಭಿಸಲೇಬೇಕು ಎನ್ನುವ ಅಲಿಖಿತ ನಿಯಮವೊಂದನ್ನು ಹಣದ ಹಿಂದೆ ಬಿದ್ದ ಒಂದಷ್ಟು ಮಂದಿ ಜಾರಿಯಲ್ಲಿಟ್ಟಿದ್ದಾರೆ, ಅಲ್ಲಿಗೆ ಆ ಊರಿನ ನೆಮ್ಮದಿಯನ್ನು ಕಸಿದುಕೊಳ್ಳಲು ಒಂದಷ್ಟು ಆಗಂತುಕರು ಬರುತ್ತಾರೆನ್ನುವುದು ನಿಶ್ಚಿತ.

ನಾವಿವತ್ತು ಚೆಂದದ ಹಳ್ಳಿಯಲ್ಲಿ ಏಕಾಂಗಿಯಾಗಿ ಅಡ್ಡಾಡುವುದು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ, ಅಲ್ಲೆಲ್ಲೋ ಗದ್ದೆ ಬೈಲಿಗಿಳಿದರೆ ಅಲ್ಲೊಂದಷ್ಟು ಮಂದಿ ಎದುರಾಗುತ್ತಾರೆ, ಮತ್ತೆಲ್ಲೋ ರಸ್ತೆಯಲ್ಲಿ ಗಲಗಲ ಎನ್ನುತ್ತಾ ಸಾಗುತ್ತಿರುತ್ತಾರೆ, ಇನ್ಯಾರೋ ಸೊಪ್ಪಿನ ಸಂಧಿಯಲ್ಲೆಲ್ಲೋ ಕುಳಿತ ಹಕ್ಕಿಯ ಫೋಟೊ ಹಿಡಿಯುತ್ತಾ ಕುಳಿತಿರುತ್ತಾರೆ, ನಮ್ಮ ಪಕ್ಕದಲ್ಲೇ ಬರ್ರನೆ ಪ್ರವಾಸಿಗರ ವಾಹನವೊಂದು ದೂಳೆಬ್ಬಿಸಿ ಹೋಗುತ್ತದೆ.

ಐದಾರು ಮನೆಗಳಿರುವ ಮಲೆನಾಡಿನ ಕೆಲವು ಹಳ್ಳಿಗಳು ಇನ್ನು ಕೆಲವೇ ವರ್ಷಗಳಲ್ಲಿ ಹೆರಿಟೇಜ್ ರೆಸಾರ್ಟುಗಳಾಗುವ ಸಂಭವವಿದೆ.

ಹೌದು … ಪ್ರವಾಸ ಈಗ ಉದ್ಯಮವಾಗಿದೆ, ಕೈಗಾರಿಕೋದ್ಯಮ ತನ್ನ ತ್ಯಾಜ್ಯವನ್ನು ಪಕ್ಕದ ಕೆರೆಗೋ, ನದಿಗೋ ಬಿಟ್ಟಂತೆ, ಪ್ರವಾಸೋದ್ಯಮ ತನ್ನ ತ್ಯಾಜ್ಯವನ್ನು ಕಾಡು, ಗುಡ್ಡ, ಜಲಮೂಲಗಳಿಗೆ ಬಿಡುತ್ತಿದೆ!

 

ಲೇಖಕರು: ಕಾರ್ತಿಕ್ ಬೆಳಗೋಡು

Click to comment

Leave a Reply

Your email address will not be published. Required fields are marked *

4 × 5 =

To Top
WhatsApp WhatsApp us