ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ನಾಂಗ್ಯಾದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ ಐವರು ಸೈನಿಕರನ್ನು ಹುಡುಕಿ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.
ಭಾರತ-ಟಿಬೆಟ್ ಗಡಿ ಪೊಲೀಸರ (ಐಟಿಬಿಪಿ) ಪ್ರಕಾರ ಇನ್ನೂ ನಾಲ್ಕೈದು ಅಂಗುಲದಷ್ಟು ಹಿಮ ಬಿದ್ದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಈ ವಲಯದಲ್ಲಿ ಉಷ್ಣಾಂಶ ಸೊನ್ನೆಗಿಂತಲೂ ೧೫ ಡಿಗ್ರಿಗಳಷ್ಟು ಕಡಿಮೆಯಿದೆ.
ಸಿಲುಕಿದ ಸೈನಿಕರನ್ನು ಪತ್ತೆ ಮಾಡಿ ರಕ್ಷಿಸಲು ೨೫೦ಕ್ಕೂ ಹೆಚ್ಚು ಮಂದಿ ಭಾರತೀಯ ಸೈನಿಕರು, ಐಟಿಬಿಪಿ ಪಡೆಯವರು, ಬಿಆರ್‌ಒ ಯಂತ್ರಗಳನ್ನು ನಿಯೋಜಿಸಲಾಗಿದೆ.
ಕಿನ್ನೌರ್ ಜಿಲ್ಲೆಯ ಪೂಹ್ ಉಪವಲಯದಲ್ಲಿ ಸೇನಾ ಕ್ಷೇತ್ರಕ್ಕೆ ನೀರು ಸರಬರಾಜು ಮಾಡುವ ಕೊಳವೆಯೊಂದನ್ನು ದುರಸ್ತಿ ಮಾಡಲು ಸುಮಾರು ೧೬ ಜನ ಸೈನಿಕರು ಬುಧವಾರ ಹೊರಟಿದ್ದರು. ಈ ೧೬ ಜನರಲ್ಲಿ ೫ ಜನರು ಹಿಮಪಾತಕ್ಕೆ ಸಿಲುಕಿದರು ಎಂದು ಕಿನ್ನೌರ್ ಜಿಲ್ಲೆಯ ಉಪ ಆಯುಕ್ತ ಗೋಪಾಲ್ ಚಂದ್ ತಿಳಿಸಿದರು.
ಈ ತಿಂಗಳ ಅರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಕುಲಗಾಮ್ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಆರು ಮಂದಿ ಭದ್ರತಾ ಪಡೆಯವರು ಹಾಗೂ ಇಬ್ಬರು ಕೈದಿಗಳು ಸತ್ತುಹೋದರು.
