ಪರಮಾಣು ಶಸ್ತ್ರಗಳನ್ನು ವಿಶ್ವದಾದ್ಯಂತ ನಿಷೇಧಿಸಲು ರೆಡ್ ಕ್ರಾಸ್ ಸಂಘಟನೆಗಳು ಕರೆ ನೀಡಿವೆ. ಒಂದು ವೇಳೆ ಯುದ್ಧ ನಡೆದು ಪರಮಾಣು ಶಸ್ತ್ರಗಳನ್ನು ಬಳಸಿದಲ್ಲಿ ಭಾರಿ ಪ್ರಮಾಣದಲ್ಲಿ ನಷ್ಟವಾಗಲಿದೆ ಎಂದು ಎಚ್ಚರಿಕೆ ನೀಡಿವೆ.
ಪ್ರಪಂಚಕ್ಕೆ ಪರಮಾಣು ಶಸ್ತ್ಗಳಿಂದ ಉಂಟಾಗುತ್ತಿರುವ ಅಪಾಯಗಳ ಬಗ್ಗೆ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ, ಅಂತರರಾಷ್ಟ್ರೀಯ ರೆಡ್ ಕ್ರಾಸ್ ಒಕ್ಕೂಟ ಹಾಗೂ ರೆಡ್ ಕ್ರೆಸೆಂಟ್ ಸೊಸೈಟಿ ಈ ನಿಟ್ಟಿನಲ್ಲಿ ಜಾಗತಿಕ ಅಭಿಯಾನ ಆರಂಭಿಸಿವೆ.
ಪರಮಾಣು ಶಸ್ತ್ರಗಳನ್ನು ಹೊಂದಿರುವ ಕೆಲವು ರಾಷ್ಟ್ರಗಳು ತಮ್ಮ “ದೀರ್ಘಕಾಲಿಕ ಪರಮಾಣು ನಿರಸ್ತ್ರೀಕರಣದ ಬಾಧ್ಯತೆ”ಯಿಂದ ದಾರಿ ತಪ್ಪುತ್ತಿವೆ.ಎಂದು ಜಿನೀವಾದಲ್ಲಿ ಜಂಟಿ ಹೇಳಿಕೆ ನೀಡಿದವು. ಈ ಪರಮಾಣು-ಸಜ್ಜಿತ ರಾಷ್ಟ್ರಗಳು ತಮ್ಮ ಶಸ್ತ್ರ ಸಂಪುಟವನ್ನು ನವೀಕರಿಸಿಕೊಳ್ಳುತ್ತಿವೆ ಹಾಗೂ ಅವುಗಳನ್ನು ಬಳಸುವುದು ಸುಲಭವನ್ನಾಗಿ ಮಾಡುತ್ತಿವೆ ಎಂದು ಹೇಳಿವೆ.
ಅಮೆರಿಕಾ ಮತ್ತು ರಷ್ಯಾ ತಾವು ೧೯೮೭ರಲ್ಲಿ ಸಹಿ ಹಾಕಿದ “ಮಧ್ಯಂತರ ಪರಮಾಣು ಶಸ್ತ್ರ ತ್ಯಾಗ ಒಪ್ಪಂದ”ದಿಂದ ಹೊರಬರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ notonukes.org ಅಭಿಯಾನ ಆರಂಭಗೊಂಡಿದೆ.
ಜಗದಾದ್ಯಂತ ರಾಷ್ಟ್ರಗಳ ಪ್ರಜೆಗಳು ಆಯಾ ಸರ್ಕಾರಗಳ ಮೇಲೆ ಒತ್ತಡ ಹೇರಿ, ವಿಶ್ವಸಂಸ್ಥೆಯ ಪರಮಾಣು ಶಸ್ತ್ರ ನಿಷೇಧ ಒಪ್ಪಂದಕ್ಕೆ ಸಹಿಹಾಕಲು ಆಗ್ರಹಿಸುವಂತೆ ಕರೆ ನೀಡಿದೆ. ಈ ಒಪ್ಪಂದಕ್ಕೆ ಇದುವರೆಗೂ ೭೦ ರಾಷ್ಟ್ರಗಳು ಸಹಿಹಾಕಿವೆ ಹಾಗು ೨೧ ರಾಷ್ಟ್ರಗಳು ಅಂಗೀಕರಿಸಿವೆ.