ಬಹರೇನ್‌ನ ಇಂಡಿಯನ್ ಸ್ಕೂಲ್ ಬಹರೇನ್ (ಐಎಸ್‌ಬಿ) ನಲ್ಲಿ “ಪಂಜಾಬಿ ದಿವಸ್ ೨೦೧೯” ಸಮಾರಂಭವನ್ನು ಸಂಭ್ರಮ, ಉತ್ಸಾಹದೊಂದಿಗೆ ಆಚರಿಸಲಾಯಿತು. ಶಾಲೆಯ ಪಂಜಾಬಿ ಭಾಷಾ ಇಲಾಖೆಯು ಈ ಸಮಾರಂಭವನ್ನು ಆಯೋಜಿಸಿತು.
ಎಬಿಐಸಿ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ತಿಲಕ್ ರಾಜ್ ಸಿಂಗ್ ದುವಾ ದೀಪ ಬೆಳಗಿಸುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ಗುರುದ್ವಾರ ಗುರುಮಠ್ ವಿದ್ಯಾ ಕೇಂದ್ರದ ಕಾರ್ಯದರ್ಶಿ ಜಸ್ಬೀರ್ ಸಿಂಗ್ ಗೌರವಾನ್ವಿತ ಅತಿಥಿಯಾಗಿದ್ದರು. ಐಎಸ್‌ಬಿ ಗೌರವಾನ್ವಿತ ಸಹ-ಕಾರ್ಯದರ್ಶಿ ಪ್ರೇಮಲತಾ ಎನ್‌ಎಸ್, ಇಸಿ ಸದಸ್ಯ (ಶೈಕ್ಷಣಿಕ) ಮಹಮ್ಮದ್ ಖುರ್ಷೀದ್ ಆಲಮ್, ಪ್ರಾಂಶುಪಾಲ ವಿ ಆರ್ ಪಳನಿಸಾಮಿ, ಸಿಬ್ಬಂದಿ ಪ್ರತಿನಿಧಿ ಜಾನ್ಸನ್ ಕೆ ದೇವಸಿ, ಉಪ-ಪ್ರಾಂಶುಪಾಲರು, ಸಿಬ್ಬಂದಿ ಮತ್ತು ವಿದ್ಯಾರ್ಥಿ ವರ್ಗದವರೆಲ್ಲರೂ ಉಪಸ್ಥಿತರಿದ್ದರು.
ಮುಖ್ಯ ಅತಿಥಿ ತಿಲಕ್ ರಾಜ್ ಸಿಂಗ್ ದುವಾ ತಮ್ಮ ಭಾಷಣದಲ್ಲಿ, ದೇಶದ ವಿವಿಧ ಕ್ಷೇತ್ರಗಳಲ್ಲಿ ಪಂಜಾಬ್ ಮತ್ತು ಪಂಜಾಬಿ ಭಾಷೆಯ ಕೊಡುಗೆಗಳ ಬಗ್ಗೆ ತಿಳಿಯಪಡಿಸಿದರು. ಪಂಜಾಬಿ ದಿವಸದ ಸಾಫಲ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅಪಾರ ಕೊಡುಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗೌರವಾನ್ವಿತ ಅತಿಥಿ ಜಸ್ಬೀರ್ ಸಿಂಗ್ ತಮ್ಮ ಭಾಷಣದಲ್ಲಿ ಪಂಜಾಬಿ ದಿವಸದ ಪ್ರಯುಕ್ತ ಶಾಲೆಯ ಎಲ್ಲ ವಿದ್ಯಾರ್ಥಿಗಳು, ಆಡಳಿತ-ಶಿಕ್ಷಕ ವೃಂದದವರು ಹಾಗೂ ಅಲ್ಲಿರುವ ಪ್ರೇಕ್ಷಕರೆಲ್ಲರಿಗೂ ಶುಭಾಷಯ ಕೋರಿದರು. ಅವರು ಪಂಜಾಬ್ ಭಾಷೆಯ ಅಪಾರ ಕೊಡುಗಯ ಬಗ್ಗೆ ಮಾತನಾಡಿ, ಪಂಜಾಬ್ ಅತಿ ಶ್ರೀಮಂತ ಭಾಷೆ ಎಂದರು. ಇಸಿ ಸದಸ್ಯ ಮಹಮ್ಮದ್ ಖುರ್ಷೀದ್ ಆಲಂ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ ಅವರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಪಂಜಾಬಿ ಭಾಷೆಯ ಸಾಹಿತ್ಯದ ಕೊಡುಗೆಯನ್ನು ವಿವರಿಸಿದರು. ಸಹ-ಕಾರ್ಯದರ್ಶಿ ಪ್ರೇಮಲತಾ ಅವರಉ ಸಹ ಸಮಾರಂಭದಲ್ಲಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬಿನ ಕೊಡುಗೆಯನ್ನು ತಿಳಿಯಪಡಿಸಿದರು. ಪ್ರಾಂಶುಪಾಲ ವಿ ಆರ್ ಪಳನಿಸಾಮಿ ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳಿಗೆ ಸ್ಮರಣಾರ್ಥಗಳನ್ನು ಕೊಟ್ಟರು. ವಿಭಾಗದ ಮುಖ್ಯಸ್ಥ ಬಾಬೂ ಖಾನ್ ಹಲವು ಸ್ಪ್ರರ್ಧೆಗಳಲ್ಲಿ ಗೆದ್ದು ಪ್ರಶಸ್ತಿ ಗಳಿಸಿದವರ ಹೆಸರುಗಳನ್ನು ಕೂಗಿದರು. ಇವರೆಲ್ಲರಿಗೂ ಮುಕುಟ ಮತ್ತು ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಇದಕ್ಕೂ ಮುಂಚೆ, ಕಾರ್ಯಕ್ರಮವು ಬಹರೇನ್ ಹಾಗೂ ಭಾರತದ ರಾಷ್ಟ್ರಗೀತೆಗಳೊಂದಿಗೆ ಆರಂಭವಾಯಿತು. ಂತರ ಶಾಲಾ ಪ್ರಾರ್ಥನೆ, ಪವಿತ್ರ ಗ್ರಂಥಗಳಾದ ಕುರಾನ್ ಮತ್ತು ಗುರು ಗ್ರಂಥ್ ಸಾಹಿಬ್ ಇಂದ ಪಠಣ ಮಾಡಲಾಯಿತು. ವಿದ್ಯಾರ್ಥಿಗಳೆಲ್ಲರೂ ಷಬಾದ್ ಪ್ರಾರ್ಥನೆ ಮಾಡಿದರು. ನಂತರ ಕಾರ್ಯಕ್ರಮವನ್ನು ಆರಂಭಿಸಲು ಜ್ಯೋತಿ ಬೆಳಗಿಸಲಾಯಿತು. ಪಂಜಾಬಿ ಶಿಕ್ಷಕಿ ರೆವಾ ರಾಣಿ ಅವರು ಪಂಜಾಬಿ ಭಾಷೆಯ ಸಂಕ್ಷಿಪ್ತ ಪರಿಚಯ ನೀಡಿದರು.
ಇಡೀ ವಾರ ನಡೆದ ಉತ್ಸವಕ್ಕೆ ಇದು ಸಮಾರೋಪ ಸಮಾರಂಭವಾಗಿತ್ತು. ಪಂಜಾಬಿಯನ್ನು ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೈಬರಹ, ಪದ್ಯ ಪಠಣ ಮತ್ತು ಚಿತ್ರ ಸಂಕಲನ ಮುಖ್ಯ ಸ್ಪರ್ಧೆಗಳಾಗಿದ್ದವು.
ಸ್ಪರ್ಧೆಗಳ ಜೊತೆ, ಪಂಜಾಬಿ ಗಿಡ್ಡ ಕುಣಿತ, ಪಂಜಾಬಿ ಪದ್ಯಗಳು, ಪಂಜಾಬಿ ಹಾಡುಗಳು ಮತ್ತು ಪಂಜಾಬಿ ಭಾಂಗಡಾ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಒಂಬತ್ತು ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಪಂಜಾಬ್ ಬಗ್ಗೆ ಅದ್ದೂರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಪರಮಿಂದರ್ ಕೌರ್ ಧನ್ಯವಾದ ಭಾಷಣ ಮಾಡಿದರು.
ಅಂತರರಾಷ್ಟ್ರೀಯ ವಾರ್ತಾ ವಿಭಾಗ, ಬಹರೇನ್
ಸಿಸೆಲ್ ಪನಯಲ್ ಸೊಮನ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಇಂದ್‌ಸಮಾಚಾರ್, ಮಧ್ಯಪ್ರಾಚ್ಯ ವಲಯ