ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪುಲ್ವಮಾ ಜಿಲ್ಲೆಯಲ್ಲಿ ಪಾಕಿಸ್ತಾನಿ ಉಗ್ರರ ಅಟ್ಟಹಾಸದ ವಿರುದ್ಧ ಆಗ್ರೋಶಗೊಂಡ ಜನರು, ಹೊಸ ದೆಹಲಿಯಲ್ಲಿರುವ ಪಾಕಿಸ್ತಾನ ದೂತಾವಾಸದ ಎದುರು ಸೇರಿ ಆ ದೇಶದ ವಿರುದ್ಧ ಘೋಷಣೆ ಕೂಗಿದರು.
ನಿನ್ನೆಯ ಪುಲ್ವಾಮಾ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ದೂತಾವಾಸದ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿದೆ.
“ನಿನ್ನೆ ನಡೆದ ಘಟನೆ ಸಾಮೂಹಿಕ ಮತ್ತು ಅಮಾನುಷ ಕಗ್ಗೊಲೆ” ಎಂದು ಪ್ರತಿಭಟನಾಕಾರರೊಬ್ಬರು ಹೇಳಿದರು.
ಪುಲ್ವಾಮಾ ಹತ್ಯಾಕಾಂಡದ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಪಾಕಿಸ್ತಾನದ ದೂತಾವಾಸ ಅಧಿಕಾರಿ ಸೊಹೈಲ್ ಮಹಮೂದ್ ಉತ್ತರಿಸದೇ ಮುನ್ನಡೆದರು.
ಭಾರತದೆಲ್ಲೆಡೆ ಪಾಕಿಸ್ತಾನದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಹಲವು ರಾಷ್ಟ್ರಗಳ ನಾಯಕರು ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿ ಮಾತನಾಡಿದರು. ಉತ್ತರ ಪ್ರದೇಶದಲ್ಲಿ ಪಾಕಿಸ್ತಾನ-ವಿರೋಧಿ ಘೋಷಣೆಗಳು ಕೇಳಿಬಂದವು.
ಗಮನಾರ್ಹ ಬೆಳವಣಿಗೆಯಲ್ಲಿ, ಭಾರತ ಸರ್ಕಾರವು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿಯವರನ್ನು ಕೂಡಲೇ ಸ್ವದೇಶಕ್ಕೆ ಮರಳಲು ನಿರ್ದೇಶಿಸಿದೆ.
ಇಂದು ಬೆಳಿಗ್ಗೆ ಭಾರತ ಸರ್ಕಾರವು ೧೯೯೬ರಲ್ಲಿ ನೀಡಿದ್ದ “Most Favoured Nation” ಸ್ಥಾನಮಾನವನ್ನು ಹಿಂಪಡೆಯಿತು.
ಪ್ರಧಾನಿ ನರೇಂದ್ರ ಮೋದಿಯವರು ಹುತಾತ್ಮರಾದ ಸಿಆರ್‌ಪಿಎಫ್ ಸೈನಿಕರಿಗೆ ನಮನ ಸಲ್ಲಿಸಿ, ದುಷ್ಕರ್ಮಿಗಳು ಮತ್ತು ಅವರ ಪೋಷಕರು ದೊಡ್ಡ ಬೆಲೆ ತೆರಬೇಕಾಗುತ್ತದೆ, ದೇಶದ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದರು.
ಚಿತ್ರ ಕೃಪೆ: DNA India
