ಕಳೆದ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಸುಮಾರು ೩೦%ರಷ್ಟು ಕಂಪ್ಯೂಟರ್ ಬಳಕೆದಾರರಿಗೆ ಆನ್ಲೈನ್ ಅಪಾಯಗಳು ಎದುರಾದವು ಎಂದು ಜಾಗತಿಕ ಸೈಬರ್ ಭದ್ರತಾ ಉತ್ಪನ್ನ ಉದ್ದಿಮೆ ಕಸ್ಪರಸ್ಕಿ ತಿಳಿಸಿದೆ.
ಸಂಭವಿಸಿದ ಸ್ಥಳೀಯ ಅಪಾಯಗಳ ಪೈಕಿ ಸೋಂಕಿಗೊಳಗಾದ ಯುಎಸ್‌ಬಿ ಸಾಧನ ಸಾಮಾನ್ಯ ಘಟನೆ ಎಂದು ಕಸ್ಪರಸ್ಕಿ ತಿಳಿಸಿದೆ. ಬ್ರೌಸರ್‌ಗಳ ಮೂಲಕ ಸೈಬರ್ ಧಾಳಿ ನಡೆಸುವುದು ಈಗ ಪ್ರಾಥಮಿಕ ರೀತಿಯಾಗಿ ಹೊರಹೊಮ್ಮುತ್ತಿದೆ ಎಂದು ದತ್ತಾಂಶಗಳನ್ನು ಕಲೆಹಾಕಿ ಕಸ್ಪರಸ್ಕಿ ಮಾಹಿತಿ ನೀಡಿದೆ.
ಬಳಕೆದಾರರಿಗೆ ಅರಿವಿಲ್ಲದೇ, ಬ್ರೌಸರ್ ಮೂಲಕ ದುಷ್ಪರಿಣಾಮಕಾರಿ ತಂತ್ರಾಂಶಗಳು ಕಂಪ್ಯೂಟರ್‌ಗಳ ಮೇಲೆ ಅಕ್ರಮಣ ಮಾಡಿ ಖಾಸಗಿ ದತ್ತಾಂಶವನ್ನೆಲ್ಲ ಕದಿಯುವ ಪ್ರಸಂಗಗಳೂ ನಡೆದದ್ದುಂಟು. ಹಣಕಾಸಿನ ಮಾಹಿತಿ ಮತ್ತು ರಹಸ್ಯಪದಗಳೂ ಸಹ ಕಳುವಾಗಿ ಬಳಕೆದಾರರ ಬ್ಯಾಂಕ್ ಖಾತೆಗಳಿಂದ ಹಣ ದೋಚಿಹೋದ ಘಟನೆಗಳೂ ಸಂಭವಿಸಿದವು.
ಸುಮಾರು ೫೨.೪%ರಷ್ಟು ಭಾರತೀಯ ಕಂಪ್ಯೂಟರ್ ಬಳಕೆದಾರರು ಸ್ಥಳೀಯ ಅಪಾಯಗಳನ್ನು ಎದುರಿಸಿದ್ದು ವರದಿಯಾಗಿದೆ.
ಪ್ರಮಾಣೀಕೃತ ವೈರಸ್-ರೋಧಕ ತಂತ್ರಾಂಶಗಳನ್ನು ಕಂಪ್ಯೂಟರ್‌ಗಳಲ್ಲಿ ಸ್ಥಾಪಿಸುವುದೇ ಆನ್ಲೈನ್ ಧಾಳಿಯ ವಿರುದ್ಧ ರಕ್ಷಿಸಿಕೊಳ್ಳುವ ಪ್ರಾಥಮಿಕ ಮಾರ್ಗ ಎಂದು ಕಸ್ಪರಸ್ಕಿ (ದಕ್ಷಿಣ ಏಷ್ಯಾ) ಪ್ರಮುಖ ವ್ಯವಸ್ಥಾಪಕ ಶ್ರೇಣಿಕ್ ಭಾಯಾನಿ ತಿಳಿಸಿದರು.
ಚಿತ್ರ ಕೃಪೆ: Scarsdale
WhatsApp us