ಕೇರಳ ಸರ್ಕಾರವು ಬಂಡೀಪುರದ ಮೂಲಕ ಸಂಚಾರ ವ್ಯವಸ್ಥೆ ಮಾಡುವ ಹುನ್ನಾರವನ್ನು ಇನ್ನು ಬಿಟ್ಟಿಲ್ಲ.
ಪರಿಸರ ಹಾಗೂ ಕಾಡುಪ್ರಾಣಿಗಳ ಹಿತಾಸಕ್ತಿ ಪರಿಗಣಿಸಿ, ಕರ್ನಾಟಕ ಸರ್ಕಾರವು ಕೆಲ ತಿಂಗಳುಗಳ ಹಿಂದೆ ಬಂಡೀಪುರ ಅಭಯಾರಣ್ಯದ ಮೂಲಕ ರಾತ್ರಿ ಸಂಚಾರಕ್ಕೆ ಅನುಮತಿ ನಿರಾಕರಿಸಿ, ಅರಣ್ಯದ ಮೂಲಕ ಹಾದುಹೋಗುವ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪವನ್ನೂ ಸಹ ತಿರಸ್ಕರಿಸಿತು.
ಇದಕ್ಕೆ ಸುಮ್ಮನಿರದ ಕೇರಳ ಸರ್ಕಾರ, ತನ್ನ ಬಜೆಟ್‌ನಲ್ಲಿ ಬಂಡೀಪುರ ಎತ್ತರದ ಹೆದ್ದಾರಿ ನಿರ್ಮಿಸಲು ೫೦೦ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಇದನ್ನು ಕೇರಳದ ಹಣಕಾಸು ಸಚಿವ ಟಿ ಎಂ ಥಾಮಸ್ ಮಂಡಿಸಿದರು. ಪ್ರವಾಹದಿಂದ ನಲುಗಿದ ಕೇರಳವನ್ನು ಪುನಃ ಅಭಿವೃದ್ಧಿ ಗೊಳಿಸಲು ೧,೦೦೦ ಕೋಟಿ ರೂಪಾಯಿ ಪ್ಯಾಕೇಜ್‌ನ ಜೊತೆಗೆ ವಯನಾಡು-ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲಕ ಏರಿಸಿದ ಹೆದ್ದಾರಿಗಾಗಿ ೫೦೦ ಕೋಟಿ ರೂಪಾಯಿ ಮೀಸಲಿಟ್ಟಿದೆ.
ಪ್ರಾಣಿಗಳು ರಾತ್ರಿಯ ವೇಳೆ ಹೆಚ್ಚು ಓಡಾಡುತ್ತವೆ. ಅವು ವಾಹನದಡಿ ಸಿಕ್ಕಿ ತಮ್ಮ ಪ್ರಾಣಕ್ಕೆ ಅಪಾಯ ಸಂಭವಿಸಬಹುದು. ಅಲ್ಲದೆ, ಅನೆ, ಹುಲಿ, ಚಿರತೆಯಂತಹ ಪ್ರಾಣಿಗಳು ವಾಹನಗಳ ಮೇಲೆ ಧಾಳಿ ಮಾಡಿ ಪ್ರಯಾಣಿಕರ ಜೀವಗಳಿಗೆ ಅಪಾಯ ಒಡ್ಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಕಾನೂನುಬಾಹಿರ ಹಾಗೂ ಅಕ್ರಮ ಚಟುವಟಿಕೆಗಳೂ ಸಹ ನಡೆಯುವ ಸಾಧ್ಯತೆಯಿದೆ. ಈ ಕಾರಣಗಳಿಂದ, ಕರ್ನಾಟಕ ಸರ್ಕಾರವು ಬಂಡೀಪುರದ ಮೂಲಕ ರಾತ್ರಿ ಸಂಚಾರಕ್ಕೆ ಅನುಮತಿ ನೀಡಲಿಲ್ಲ.
ಏರಿಸಿದ ಹೆದ್ದಾರಿಯ ಮೂಲಕ ವಾಹನಗಳು ಸುಗಮವಾಗಿ ಸಂಚರಿಸಬಹುದು, ಜೊತೆಗೆ ಪ್ರಾಣಿಗಳು ಮೇಲ್ಸೇತುವೆಯ ಮೇಲೆ ಬರಲು ಸಾಧ್ಯವಿಲ್ಲ; ಕರ್ನಾಟಕ ರಾಜ್ಯವು ರಾತ್ರಿ ವಾಹನ ಸಂಚಾರಕ್ಕೂ ಅನುಮತಿ ನೀಡಬಹುದು ಎಂಬುದು ಕೇರಳದ ಲೆಕ್ಕಾಚಾರ.
ಕರ್ನಾಟಕದ ಪರಿಸರವಾದಿಗಳು ಕೇರಳದ ಈ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗೊಂದಲ ಸೃಷ್ಟಿಸಿ ಲಾಭ ಪಡೆಯುವುದೇ ಕೇರಳದ ಮೂಲಭೂತ ಹುನ್ನಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
