ಮಾನವನು ವ್ಯಾಯಾಮ ಮಾಡುವಾಗ ಉತ್ಪಾದನೆಯಾಗುವ ಅಂತಃಸ್ರಾವವು (ಹಾರ್ಮೊನ್) ಅಲ್ಝೈಮರ್ಸ್ ಕಾಯಿಲೆಯನ್ನು ತಡೆಗಟ್ಟುವಲ್ಲಿ ನೆರವಾಗಬಹುದು ಎಂದು ಅಧ್ಯಯನವೊಂದು ವರದಿ ಮಾಡಿದೆ.
ಕೊಲಂಬಿಯಾ ವಿಶ್ವವಿದ್ಯಾಲಯದ ವಗೆಲೊಸ್ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆ ತಜ್ಞರ ಕಾಲೇಜಿನ ಸಂಶೋಧಕ ಅಟ್ಟೆವಿಯೊ ಅರನ್ಸಿಯೊ, ಹಾಗೂ ಟಾಬ್ ಸಂಶೋಧನಾಲಯ ಒಟ್ಟಿಗೆ ನಡೆಸಿದ ಅಧ್ಯಯನವಿದು.
ಈ ಅಧ್ಯಯನದ ವರದಿಯನ್ನು “ನೇಚರ್ ಮೆಡಿಸಿನ್” ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.
ದೈಹಿಕ ಚಟುವಟಿಕೆಗಳಲ್ಲಿ ತೊಡಗುವಾಗ, ಐರಿಸಿನ್ ಎಂಬ ಅಂಗಃಸ್ರಾವವು ಉತ್ಪಾದನೆಯಾಗಿ, ನೆನಪಿನ ಶಕ್ತಿ ಹಿಗ್ಗಿಸಿ, ಜೊತೆಗೆ ಅಲ್ಝೈಮರ್ ರೋಗ ಸಂಭವಿಸುವ ಅಪಾಯವನ್ನೂ ತಡೆಗಟ್ಟುತ್ತದೆ.
ಕೆಲ ವರ್ಷಗಳ ಹಿಂದೆ ನಡೆಸಲಾದ ಅಧ್ಯಯನದ ಪ್ರಕಾರ, ಐರಿಸಿನ್ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ, ಜೊತೆಗೆ, ಮೆದುಳಿನಲ್ಲಿ ಕಲಿಕೆ ಮತ್ತು ನೆನಪಿಗೆ ಸಂಬಂಧಪಟ್ಟ ಭಾಗವಾದ “ಹಿಪ್ಪೊಕ್ಯಾಂಪಸ್”ನಲ್ಲೂ ನರಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ.
ಸದರಿ ಸಂಶೋಧಕರು ಮೆದುಳಿನ ಬ್ಯಾಂಕ್ಗಳಿಂದ ವಿವಿಧ ಮೆದುಳುಗಳ ಅಂಗಾಂಶ ಸ್ಯಾಂಪಲ್ಗಳನ್ನು ಪಡೆದು ಅಧ್ಯಯನ ನಡೆಸಿದರು. ಈ ಅಂಗಾಂಶಗಳಲ್ಲಿ ಐರಿಸಿನ್ ಅಂಶವಿದ್ದದ್ದನ್ನು ಮನಗಂಡರು. ಆಲ್ಝೈಮರ್ಸ್ ಬಾಧಿತ ಮೆದುಳಿನ ಅಂಗಾಂಶದಲ್ಲಿ ಐರಿಸಿನ್ ಅಂಶ ಕಡಿಮೆಯಿತ್ತು.
ಈ ಸಂಶೋಧನೆಯಿಂದ, ಅಲ್ಝೈಮರ್ಸ್ ಕಾಯಿಲೆ ಮತ್ತು ಬುದ್ಧಿಮಾಂದ್ಯತೆ ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಐರಿಸಿನ್ ಅಥವಾ ಐರಿಸಿನ್ನ ತರಹ ಕಾರ್ಯ ನಿರ್ವಹಿಸುವ ತತ್ಸಮಾನ ಔಷಧೀಯ ವಸ್ತುಗಳನ್ನು ಕಂಡುಹಿಡಿಯಲು ಯತ್ನಿಸುತ್ತೇವೆ ಎಂದು ಅರನ್ಸಿಯೊ ಹೇಳಿದರು.
