ಸೋಮವಾರದಂದು ಕೇಂದ್ರೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಭಾರತೀಯ ಭೂ, ನೌಕಾ ಮತ್ತು ವಾಯು ಪಡೆಗಳ ಮುಖ್ಯಸ್ಥರು, ಹಾಗೂ ವಿಶ್ವದ ವಿವಿಧೆಡೆ ನೆಲೆಸಿರುವ ದೇಶದ ರಕ್ಷಣಾ ಸಿಬ್ಬಂದಿಯವರೊಂದಿಗೆ ಸಭೆ ನಡೆಸುವರು.
ಸಭೆಯಲ್ಲಿ ಅಂತರರಾಷ್ಟ್ರೀಯ ಸೇನಾ ಸಹಕಾರ ಮತ್ತು ರಾಜತಾಂತ್ರಿಕತೆಯ ವಿಚಾರಗಳನ್ನೂ ಸಹ ಚರ್ಚಿಸಲಾಗುವುದು.
ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದನಾ ಕೃತ್ಯದ ಹಿನ್ನೆಲೆಯಲ್ಲಿ ಭಾರತವು ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸುವ ನಿಟ್ಟಿನಲ್ಲಿ ಈ ಸಭೆಯನ್ನು ಕರೆಯಲಾಗಿದೆ. ಪಾಕಿಸ್ತಾನವು ತನ್ನ ನೆಲೆಯಲ್ಲಿ ಜೈಷ್-ಎ-ಮೊಹಮ್ಮದ್ ಅಂತಹ ಭಯೋತ್ಪಾದನಾ ಸಂಘಟನೆಗಳಿಗೆ ರಕ್ಷಣೆ ನೀಡುತ್ತಿದೆ.
ಈ ಸಭೆಯು ಎರಡು ದಿನಗಳ ಕಾಲ ನಡೆಯಲಿದ್ದು, ರಕ್ಷಣಾ ಮಂತ್ರಿ ಮತ್ತು ಮೂವರೂ ಸೇನಾ ಮುಖ್ಯಸ್ತರು ರಕ್ಷಣಾ ಸಿಬ್ಬಂದಿ ವರ್ಗದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕರ್ನಲ್ ಮತ್ತು ಬ್ರಿಗೇಡಿಯರ್ ಹುದ್ದೆಯ ರಕ್ಷಣಾ ಸಿಬ್ಬಂದಿಗಳು ೪೪ ಮಂದಿಯಿದ್ದಾರೆ. ಇವರು ನೆಲೆಸಿರುವ ಆಯಾ ದೇಶಗಳೊಂದಿಗೆ ರಕ್ಷಣಾ ಬಾಂಧವ್ಯ ಕಾಯ್ದುಕೊಳ್ಳುವ ಜವಾಬ್ದಾರಿ ಹೊತ್ತಿರುತ್ತಾರೆ.
ಅಮೆರಿಕಾ, ರಷ್ಯಾ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗಿನ ರಕ್ಷಣಾ ಬಾಂಧವ್ಯಗಳನ್ನು ಇನ್ನಷ್ಟು ಉತ್ತಮಗೊಳಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಲಾಗುವುದು.
ಈ ಸಭೆಯಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೂ ಸಹ ಪಾಲ್ಗೊಳ್ಳುವರೆಂದು ಮೂಲಗಳು ತಿಳಿಸಿವೆ.
