ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಹಾಳಾದ ದೇವಸ್ಥಾನದ ಕಂಬಗಳನ್ನು ಕೆಡವಿದ್ದ ನಾಲ್ವರು ಯುವಕರಿಗೆ ನ್ಯಾಯಾಲಯವು ೭೦,೦೦೦ ರೂಪಾಯಿಗಳ ದಂಡ ವಿಧಿಸಿತು.
ಜೊತೆಗೆ ರಾಜ್ಯ ಪೊಲೀಸರ ಮೇಲ್ವಿಚಾರಣೆಯಲ್ಲಿ ಈ ಕಂಬಗಳನ್ನು ಮತ್ತೆ ನಿಲ್ಲಿಸಲು ಆದೇಶ ನೀಡಿದೆ.
ಹಂಪಿಯ ದೇವಸ್ಥಾನದ ಅವಶೇಷಗಳಲ್ಲಿ ಕಂಬಗಳನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದ ವೀಡಿಯೊ ಫೆಬ್ರುವರಿ ೨ರಂದು ವೈರಲ್ ಅಯಿತು. ಇದರಲ್ಲಿ ನಾಲ್ಕೈದು ಜನ ಕಿಡಿಗೇಡಿಗಳ ಕೈವಾಡವಿದೆ ಎಂದು ಬಳ್ಳಾರಿ ಎಸ್‌ಪಿ ಅರುಣ್ ರಂಗರಾಜನ್ ಹೇಳಿದರು. ಪೊಲೀಸರು ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.
೨೦೧೯ರಲ್ಲಿ ಟೈಮ್ಸ್ ಪತ್ರಿಕೆಯ ಅತಿ ಪ್ರೇಕ್ಷಣೀಯ ಪಾರಂಪರಿಕ ಸ್ಥಳಗಳ ಪಟ್ಟಿಯಲ್ಲಿ ಹಂಪಿಗೆ ಎರಡನೆಯ ಸ್ಥಾನ ನೀಡಿ ಪ್ರಕಟಿಸಿದ ಕೆಲವೇ ದಿನಗಳಲ್ಲಿ ದುಷ್ಕರ್ಮಿಗಳು ಕಂಬಗಳನ್ನು ಕೆಡವಿದ್ದರು.
ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿರುವ ಹಂಪಿಯಲ್ಲಿ, ವಿಜಯನಗರ ಸಾಮ್ರಾಜ್ಯಕ್ಕೆ ಸೇರಿದ ಹಲವಾರು ದೇವಸ್ಥಾನದ ಅವಶೇಷಗಳಿವೆ. ಆಂದಿನ ಕಾಲದಲ್ಲಿ ಇದು ದೇಶದಲ್ಲೇ ಅತಿ ಶ್ರೀಮಂತ ನಗರವಾಗಿತ್ತು. ಪರ್ಷಿಯಾ ಮತ್ತು ಪೊರ್ಚುಗಲ್ ದೇಶಗಳಿಂದ ವರ್ತಕರು ಇಲ್ಲಿಗೆ ಭೇಟಿ ನೀಡುತ್ತಿದ್ದರು.
ವಿರೂಪಾಕ್ಷ ಸ್ವಾಮಿ ದೇವಾಲಯ ಹಾಗೂ ಉಗ್ರನರಸಿಂಹ ವಿಗ್ರಹ ಹಂಪಿಯ ಅತಿ ಚಿರಪರಿಚಿತ ಹೆಗ್ಗುರುತುಗಳಾಗಿವೆ.
ಚಿತ್ರ ಕೃಪೆ: ಹಂಪಿಯ ವಿಕಿಪೀಡಿಯಾ ಪುಟ
