ಅಯೋಧ್ಯೆಯ ರಾಮಮಂದಿರ ವಿಚಾರವನ್ನು ೨೪ ತಾಸುಗಳಳೊಳಗೆ ಇತ್ಯರ್ಥಗೊಳಿಸಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಲವಾಗಿ ಪ್ರತಿಪಾದಿಸಿದರು.
ರಾಜ್ಯದ ವಿಧಾನ ಸಭೆಯಲ್ಲಿ ಮಾತನಾಡಿದ ಅವರು, “ಅಯೋಧ್ಯೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಚಿರಪರಿಚಿತ ನಗರವಾಗಿದೆ. ಇದಕ್ಕೆ ರಾಮದೇವರು ಕಾರಣ, ಬಾಬರ್ ಎಂಬೊಬ್ಬ ವಿದೇಶಿ ಅಕ್ರಮಣಕಾರಿ ಅಲ್ಲ. ಕೋಟ್ಯಾಂತರ ಜನರ ನಂಬಿಕೆಗಳನ್ನು ಗೌರವಿಸುವುದು ಅತ್ಯಗತ್ಯ. ಜನರ ಭಾವನೆಗಳನ್ನು ನ್ಯಾಯಾಲಯವು ಗೌರವಿಸಬೇಕು ಎಂಬುದನ್ನು ನಾನು ಹಲವು ಸಲ ಹೇಳಿದ್ದೇನೆ. ‘ರಾಮ್ ಲಲ್ಲಾ ಇರುವ ಸ್ಥಳದಲ್ಲೇ ದೇವಸ್ಥಾನವು ನಿರ್ಮಾಣವಾಗಬೇಕು ಎಂದು ಅಲ್ಲಾಹಾಬಾದ್ ಉಚ್ಚ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ” ಎಂದು ಹೇಳಿದರು.
ಅಲ್ಲಾಹಾಬಾದ್ ಉಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ೨೦೧೦ರ ಸೆಪ್ಟೆಂಬರ್ ೩೦ರಂದು ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬೇಕಿದೆ.
“ಈ ವಿವಾದ ಅಂದೇ, ಅಲ್ಲೇ ಇತ್ಯರ್ಥಗೊಳಿಸಬೇಕಿತ್ತು. ಆ ಭೂಮಿಯ ವಿಭಜನೆಯ ಬಗ್ಗೆ ಯಾವುದೇ ಪ್ರಶ್ನೆ ಇಲ್ಲ. ರಾಮ ಜನ್ಮಭೂಮಿ ಅಲ್ಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಮಾತ್ರ ವಿವಾದವಿತ್ತು. ಈ ವಿವಾದವು ಆಗಲೇ ಇತ್ಯರ್ಥಗೊಂಡಿದೆ. ಹಾಗಾಗಿ ಈ ವಿಚಾರಕ್ಕೆ ಪರಿಹಾರ ಕಂಡುಕೊಳ್ಳಲು ೨೪ ತಾಸುಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳಬಾರದು” ಎಂದು ಯೋಗಿ ಆದಿತ್ಯನಾಥ್ ತಮ್ಮ ಮಾತನ್ನು ಬಲವಾಗಿ ಸಮರ್ಥಿಸಿದರು.
ರಾಮಜನ್ಮಭೂಮಿ ವಿಚಾರವು ಭಾರತೀಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬರೋಬ್ಬರಿ ೮ ವರ್ಷಗಳಿಂದ ಧೂಳು ತಿನ್ನುತ್ತಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪಕ್ಷಗಳು ವಿಚಾರಣೆ ಪ್ರತಿದಿನವೂ ನಡೆಸಬೇಕು ಎಂದು ಮನವಿ ಮಾಡುತ್ತಿವೆ. ಆದರೆ ಇದು ಕೇವಲ ಅರಣ್ಯರೋದನವಾಗಿದೆಯಷ್ಟೇ.
