ಚೀನೀ ದೂರವಾಣಿ ಸಂವಹನ ಉದ್ದಿಮೆ ಹುವಾವೈ ನಾನಾ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಅದರ ಮುಖ್ಯ ಹಣಕಾಸು ಅಧಿಕಾರಿಣಿ ಮೆಂಗ್ ವಾಂಗ್ಝೌ ಅವರನ್ನು ಕೆನಡಾದಿಂದ ಅಮೆರಿಕಾಗೆ ಗಡೀಪಾರು ಮಾಡುವ ವಿಚಾರವೊಂದೇ ಅಲ್ಲ; ಹುವಾವೈ ಸೇರಿದಂತೆ ಹಲವು ಚೀನೀ ಉದ್ದಿಮೆಗಳು ತಮ್ಮ ಭದ್ರತಾ ವ್ಯವಸ್ಥೆಗೆ ತೀವ್ರ ಅಪಾಯವೊಡ್ಡುತ್ತಿವೆ ಎಂದು ಹಲವು ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.
ಉದಾಹರಣೆಗೆ, ತನ್ನ ಕಂಪ್ಯೂಟರ್ ಜಾಲದೊಳಗೆ ಅತಿಕ್ರಮ ಪ್ರವೇಶ ನಡೆಸುವ ಯತ್ನವೊಂದನ್ನು ಆಸ್ಟ್ರೇಲಿಯಾದ ಸಂಸತ್ತು ವರದಿ ಮಾಡಿತು. ಇದರ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳು ಫೆಬ್ರುವರಿ ೮ರಂದು, “ನಮ್ಮ ಕಂಪ್ಯೂಟರ್ ಜಾಲದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲಾ ಬಳಕೆದಾರರೂ ತಮ್ಮ ಗುಪ್ತಪದಗಳನ್ನು ಬದಲಾಯಿಸಿಕೊಳ್ಳಿ” ಎಂದು ಸೂಚಿಸಿದರು.
ತಪ್ಪಿತಸ್ಥರು ಯಾರು ಎಂಬುದನ್ನು ಹೆಸರಿಸಿಲ್ಲ, ಆದರೆ ಇದರ ಹಿಂದೆ ವಿದೇಶಿ ಸರ್ಕಾರವೊಂದರ ಕೈವಾಡವಿರಬಹುದು ಎಂದು ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿವೆ. ಈ ಘಟನೆಯು ವಿದೇಶಿ ಕಿತಾಪತಿಗಳು ಕಂಪ್ಯೂಟರ್ ಜಾಲವನ್ನು ಅತಿಕ್ರಮವಾಗಿ ಪ್ರವೇಶಿಸಿ ಏನೆಲ್ಲಾ ಅಪಾಯಕಾರಿ ಕೃತ್ಯಗಳನ್ನು ಮಾಡಬಹುದು ಎಂಬುದನ್ನು ತಿಳಿಯಪಡಿಸಿದೆ.
ಆಸ್ಟ್ರೇಲಿಯಾದ ಬೀದಿ ಸಿಸಿಟಿವಿ ಕ್ಯಾಮೆರಾ ಮಾರುಕಟ್ಟೆಯಲ್ಲಿ ಹೈಕ್ವಿಷನ್ ಮತ್ತು ಡಾಹುವಾ ಭದ್ರತಾ ಕ್ಯಾಮೆರಾ ಜಾಲಗಳು ಸಿಂಹಪಾಲು ಹೊಂದಿವೆ. ಹೈಕ್ವಿಷನ್ ಮತ್ತು ಡಾಹುವಾ ಚೀನೀ ಉದ್ದಿಮೆಗಳಾಗಿದ್ದು, ಅವುಗಳು ಸ್ಥಾಪಿಸಿರುವ ಕ್ಯಾಮೆರಾಗಳನ್ನು ಗೂಢಚಾರಿ ಕೃತ್ಯಗಳಿಗಾಗಿ ದುರ್ಬಳಕೆ ಮಾಡಬಹುದು ಎಂದು ಆಸ್ಟ್ರೇಲಿಯಾದ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಡಿಜೆಐ ಎಂಬ ಚೀನೀ ಡ್ರೋನ್ ಉದ್ದಿಮೆಯು ಜಗದಾದ್ಯಂತ ಡ್ರೋನ್ ಮಾರುಕಟ್ಟೆಯಲ್ಲಿ ೭೪%ರಷ್ಟು ಪಾಲು ಹೊಂದಿದೆ. ಇತ್ತೀಚೆಗೆ ಅಮೆರಿಕಾ ತನ್ನ ಸೇನೆಯು ಡಿಜೆಐ ಡ್ರೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಇದರ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸಹ ತಾನು ಕೊಂಡ ಡ್ರೋನ್‌ಗಳಲ್ಲಿ ಅಂತರಜಾಲ ವ್ಯವಸ್ಥೆಯನ್ನು ನಿಷ್ಕ್ರಿಯಗೊಸುತ್ತದೆ ಎಂದು ತಿಳಿಸಿದೆ.
ಹುವಾವೈ ಪ್ರಪಂಚದಲ್ಲೇ ಹೆಸರಾಂತ ಉದ್ದಿಮೆಯಾಗಿದ್ದರೂ ಪಾಶ್ಚಾತ್ಯ ರಾಷ್ಟ್ರಗಳು ಒಂದೊಂದಾಗಿ ತಮ್ಮ ರಾಷ್ಟ್ರೀಯ ಯೋಜನೆಗಳಲ್ಲಿ ಪಾಲ್ಗೊಳ್ಳಲು ಹುವಾವೈ ಮತ್ತು ಇತರೆ ಚೀನೀ ಉದ್ದಿಮೆಗಳಿಗೆ ಅನುಮತಿ ನಿರಾಕರಿಸುತ್ತಿವೆ.
ಈ ಕ್ರಮಗಳ ವಿರುದ್ಧ ಚೀನಾ ಪ್ರತಿಭಟಿಸುತ್ತಿದೆ. ಆದರೆ ಆ ದೇಶವು ಪಾಶ್ಚಾತ್ಯ ಉದ್ದಿಮೆಗಳಿಗೆ ತನ್ನ ಮಾರುಕಟ್ಟೆಯನ್ನು ಮುಕ್ತಗೊಳಿಸದಿರುವ ಹಾಗೂ ಆಂತರಿಕ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅನುಮತಿ ನಿರಾಕರಿಸುವ ವಿಷಯನ್ನು ಸಂಪೂರ್ಣವಾಗಿ ಮರೆತಿದೆ.
