ಪುಲ್ವಾಮಾ ಹತ್ಯಾಕಾಂಡದ ವಿರುದ್ಧ ಎಲ್ಲೆಡೆ ಆಕ್ರೋಶ ಮತ್ತು ಖಂಡನೆಯ ಸಂದೇಶಗಳು ಹರಿದಾಡುತ್ತಿವೆ.
ಹೀಗಿರುವಾಗ, ಬೆಳಗಾವಿಯ ಖಾಸಗಿ ಶಾಲಾ ಶಿಕ್ಷಕಿ “ಪಾಕಿಸ್ತಾನಕ್ಕೆ ಜೈ” ಎಂಬಂತಹ ಘೋಷಣೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಳು. ರೊಚ್ಚಿಗೆದ್ದ ಸ್ಥಳೀಯ ಯುವಕರು ಆಕೆಯ ಮನೆಗೆ ಕಲ್ಲೆಸೆದು, ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪೂರ ಗ್ರಾಮದಲ್ಲಿ ನಡೆದಿದೆ. ಜಿಲೇಕಾ ಮಮದಾಪುರ್ ಎಂಬುದು ಈ ಶಿಕ್ಷಕಿಯ ಹೆಸರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಜಿಲೇಕಾಳನ್ನು ಬಂಧಿಸಿದ್ದಷ್ಟೇ ಅಲ್ಲ, ಆಕೆಯ ಮನೆಗೆ ಕಲ್ಲೆಸೆದು, ಬೆಂಕಿ ಹಚ್ಚಿದ ಯುವಕರನ್ನೂ ಸಹ ಬಂಧಿಸಿದ್ದಾರೆ.
ಇದೇ ರೀತಿ, ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ತಾಹೀರ್ ಲತೀಫ್ (೨೩ ವರ್ಷ ವಯಸ್ಸು) ಎಂಬಾತ ಆತ್ಮಾಹುತಿ ಧಾಳಿ ಮಾಡಿದ ಉಗ್ರನ ವೀಡಿಯೋವನ್ನು ಹಂಚಿ, “ನಿನಗೆ ದೊಡ್ಡ ಸೆಲ್ಯೂಟ್, ನಿನಗೆ ಸ್ವರ್ಗ ಪ್ರಾಪ್ತಿಯಾಗುವುದರಲ್ಲಿ ಸಂಶಯವಿಲ್ಲ” ಎಂದು ಬರೆದು ಪಾಕಿಸ್ತಾನಿ ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ನ್ನು ಪ್ರಶಂಸಿಸಿದ್ದ. ತಾಹೀರ್‌ನನ್ನು ಬಾಗಲೂರು ಪೊಲೀಸರು ಶನಿವಾರ ಬಂಧಿಸಿದರು.
ಈತ ಜಮ್ಮೂ ಮತ್ತು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಮೂಲದವನು ಎಂದು ತಿಳಿದುಬಂದಿದೆ.
ಚಿತ್ರ ಕೃಪೆ: ವಿವಿಧ ಸಾಮಾಜಿಕ ಮಾಧ್ಯಮಗಳು
ಸಿಬಿನ್ ಪನಯಿಲ್ ಸೊಮನ್
ಪ್ರಾದೇಶಿಕ ಮುಖ್ಯಸ್ಥರು, ಇಂಡ್‌ಸಮಾಚಾರ್
