ಭಯೋತ್ಪಾದನೆ ಮತ್ತು ಭಯೋತ್ಪಾದಕರ ಪ್ರಭಾವವನ್ನು ನಾವು ಕಡಿಮೆಗೊಳಿಸಿದ್ದೇವೆ, ಇನ್ನು ಮುಂದೆಯೂ ಸಹ ಕಡಿಮೆಗೊಳಿಸುತ್ತಿರುತ್ತೇವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. “ಇದು ಹೊಸ ಭಾರತ. ಭಯೋತ್ಪಾದಕರು ಹಾನಿ ಎಸಗಿದರೆ ನಾವು ಬಡ್ಡಿ ಸಮೇತ ಅದನ್ನು ಅವರಿಗೇ ಚುಕ್ತಾ ಮಾಡುತ್ತೇವೆ” ಎಂದು ಮೋದಿಯವರು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ತಮಿಳುನಾಡು ಹಾಗೂ ಭಾರತದ ದಕ್ಷಿಣ ತುದಿಯಲ್ಲಿರುವ ಕನ್ಯಾಕುಮಾರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಿಂದಿನ ಸರ್ಕಾರ ಭಯೊತ್ಪಾದನೆಯ ಬಗ್ಗೆ ಮೃದು ಧೋರಣೆ ತೋರುತ್ತಿತ್ತು ಎಂದು ಅವರು ಆಪಾದಿಸಿದರು. ಉರಿ ಮತ್ತು ಪುಲ್ವಾಮಾದಲ್ಲಿ ಭಯೋತ್ಪಾದಕ ಧಾಳಿಗಳ ನಂತರ ಭಾರತದ ಸೇನಾ ಪಡೆಗಳು ಕೈಗೊಂಡ ಕ್ರಮವನ್ನು ಉಲ್ಲೇಖಿಸಿ ಅವರ ವೀರಕಾರ್ಯವನ್ನು ಶ್ಲಾಘಿಸಿದರು.
“೨೦೦೪ರಿಂದ ೨೦೧೪ರ ತನಕ ಬಹಳಷ್ಟು ಭಯೋತ್ಪಾದನಾ ಧಾಳಿಗಳು ನಡೆದವು. ಹೈದರಾಬಾದ್, ಜೈಪುರ್, ಹೊಸ ದೆಹಲಿ, ಪುಣೆ, ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಸ್ಫೋಟಗಳು ಸಂಭವಿಸಿದವು. ಇದಕ್ಕೆ ಕಾರಣರಾದವರನ್ನು ದಂಡಿಸಲಾಗುವುದು ಎಂದು ನಮ್ಮ ದೇಶದವರು ನಿರೀಕ್ಷಿಸಿದ್ದರು. ಅದರೆ ಅಂತಹದ್ದೇನೂ ಆಗಲಿಲ್ಲ. ಆದರೆ ಉರಿ ಮತ್ತು ಪುಲ್ವಾಮಾ ಧಾಳಿಗಳು ನಡೆದಾಗ, ನಮ್ಮ ಸೇನಾ ವೀರರು ಏನು ಮಾಡಿದರು ಎಂಬುದನ್ನು ನೀವೇ ನೋಡಿದ್ದೀರಿ. ನಮ್ಮ ದೇಶ ಸೇವೆ ಮಾಡುವವರ ಜಾಗೃತ ಸ್ಥಿತಿಯಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದೆ ಎಂದು ಮೋದಿ ಅವರು ಹೇಳಿದರು.
ಭಾಷಣದ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಎಎಫ್‌ನ ವೀರ ಪೈಲಟ್ ಅಭಿನಂದನ್ ವರ್ತಮಾನ್ ಅವರ ಬಗ್ಗೆ ಮಾತನಾಡಿ, ತಮಿಳುನಾಡು ಮೂಲದ ಅಭಿನಂದನ್ ಅವರ ಬಗ್ಗೆ ಇಡೀ ದೇಶ ಹೆಮ್ಮೆಯಿಂದ ಮಾತನಾಡುತ್ತಿದೆ ಎಂದರು.
