ಹೊಸದೆಹಲಿಯ ಸಂಸತ್ ಬವನದ ಕೇಂದ್ರೀಯ ಸಭಾಂಗಣದಲ್ಲಿ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಸಹಜಗಾತ್ರದ ಭಾವಚಿತ್ರವನ್ನು ಅನಾವರಣಗೊಳಿಸಿದರು.
ವಾಜಪೇಯಿ ಅವರು ತಮ್ಮ ೯೩ನೆಯ ವಯಸ್ಸಿನಲ್ಲಿ ೨೦೧೮ರ ಆಗಸ್ಟ್ ೧೬ರಂದು ವಿಧಿವಶರಾದರು.
“ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಂದಿನ ಕಷ್ಟಕರ ಪರಿಸ್ಥಿತಿಗಗಳನ್ನು ಎದುರಿಸಿ ದೃಢ ನಾಯಕತ್ವ ವಹಿಸಿದರು. ೧೯೯೮ರ ಪೊಖರಣ್ ಪರಮಾಣು ಪರೀಕ್ಷೆ ಹಾಗೂ ೧೯೯೯ರ ಕರ್ಗಿಲ್ ಯುದ್ಧ ಇದಕ್ಕೆ ಅತ್ಯುತ್ತಮ ಉದಾಹರಣೆಗಳು. ವಾಜಪೇಯಿಯರು ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ದೃಢ ನಿರ್ಧಾರಗಳನ್ನು ತೆಗೆದುಕೊಂಡರು. ಅಟಲ್ ಜಿ ಅವರನ್ನು ಭಾರತದ ಒಬ್ಬ ಮಹಾನ್ ರಾಜಕಾರಣಿ ಎಂದು ಸ್ಮರಿಸಿಕೊಳ್ಳಲಾಗುವುದು. ಗಲುವು-ಸೋಲುಗಳ ಪರಿಸ್ಥಿತಿಗಳಲ್ಲಿ ಅವರು ನಡೆದುಕೊಂಡ ರೀತಿ ಅನುಸರಣೀಯ. ಕಷ್ಟಕರ ಪರಿಸ್ಥಿತಿಗಳಲ್ಲಿಯೂ ಅವರು ತಾಳ್ಮೆ-ಸಂಯಮದಿಂದಿದ್ದರು” ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
“ಅಟಲ್ ಜಿ ಅವರದು ದೀರ್ಘಕಾಲಿಕ ರಾಜಕೀಯ ಜೀವನವಾಗಿತ್ತು. ಇದರಲ್ಲಿ ಬಹಳಷ್ಟು ವರ್ಷ ಅವರು ವಿರೋಧ ಪಕ್ಷದಲ್ಲಿ ಕಳೆದರು. ಆದರೂ ಅವರು ತಮ್ಮ ಸಿದ್ಧಾಂತಗಳಿಂದ ದಾರಿ ತಪ್ಪದೆ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸಲು ಹಿಂಜರಿಯಲಿಲ್ಲ. ಅಟಲ್‌ಜಿ ಅವರ ಭಾಷಣಗಳಲ್ಲಿ ಶಕ್ತಿಯಿತ್ತು. ಅವರ ಮೌನದಲ್ಲಿಯೂ ಅಷ್ಟೇ ಶಕ್ತಿಯಿತ್ತು. ಅವರ ಸಂವಹನ ಕುಶಲತೆ ಅಪಾರವಾಗಿತ್ತು. ಅವರಿಗೆ ಅದ್ಭುತ ಹಾಸ್ಯಪ್ರಜ್ಞೆಯಿತ್ತು” ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.
