ಭಾರತದ ರಾಷ್ಟ್ರೀಯ ಪ್ರಾಣಿ – ಹುಲಿ – ಇದರ ಸಂರಕ್ಷಣೆಯತ್ತ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಫಲವಾಗಿ ಹುಲಿಗಳ ಸಂಖ್ಯೆ ಗಮನಾರ್ಹವಾಗಿ ಏರುತ್ತಿದೆ.
ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲೇ ಹುಲಿಗಳ ಸಂಖ್ಯೆ ಅತಿ ಹೆಚ್ಚು. ಹೌದು, ಇದನ್ನು ತಿಳಿದುಕೊಂಡು ಹಲವರಿಗೆ ಸಂತಸವಾಗುವುದುಂಟು. ಆದರೆ, ಹುಲಿಗಳ ಸಂಖ್ಯೆ ಹೆಚ್ಚಾದಷ್ಟೂ ಅವುಗಳಿಗೆ ಓಡಾಡಲು, ಬೇಟೆಯಾಡಲು, ಬದುಕಲು ವ್ಯವಸ್ಥೆಯನ್ನೂ ಸಹ ಕಲ್ಪಿಸಬೇಕು ಎಂಬುದನ್ನು ಸಂಬಂಧಿತ ಅಧಿಕಾರಿಗಳು ಮರೆತಂತಿವೆ. ಇದರ (ದುಷ್)ಪರಿಣಾಮವಾಗಿ, ಹುಲಿಗಳು ಬೇಟೆಗಾಗಿ ಕಾಡಿನ ಆಚೆ ಬಂದು ಕಾಡಿನ ಸುತ್ತ ಇರುವ ಹಳ್ಳಿಗಳ ಮೇಲೆ ಧಾಳಿ ಮಾಡಿ ದನ-ಕರು, ಹಾಗೂ ಕೆಲವೊಮ್ಮೆ ಮನುಷ್ಯರನ್ನೂ ಎಳೆದುಕೊಂಡು ಹೋಗಿ ತಿಂದುಬಿಡುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿವೆ.
ಹುಲಿಗಳನ್ನು ಹೊಂದಿರುವ ರಾಜ್ಯಗಳೆಲ್ಲವೂ “ಹುಲಿ ಸಂರಕ್ಷಣಾ ಪ್ರಮಾಣ ಭರವಸೆ” Conservation Assured Tiger Standards (CATS) (ಕ್ಯಾಟ್ಸ್) ಸಮೀಕ್ಷೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರಿ, ಹುಲಿಗಳಿಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಮುನ್ನಡೆ ಸಾಧಿಸುತ್ತಿವೆ. ಆದರೆ ಅಕ್ಷರಶಃ ಹುಲಿಯು ಕರ್ನಾಟಕ ಸರ್ಕಾರದವರ ಕಿವಿಯ ಹತ್ತಿರ ಬಂದು ಅತಿಜೋರಾಗಿ ಘರ್ಜಿಸಿದರೂ ಅವರಿಗೆ ಏನೂ ಅರಿವಾಗುತ್ತಿಲ್ಲ!
ಜಾಗತಿಕ ಹುಲಿ ವೇದಿಕೆ (ಜಿಟಿಎಫ್) ಈ ಕ್ಯಾಟ್ಸ್ ಸಮೀಕ್ಷೆಯನ್ನು ನಡೆಸುತ್ತಿದೆ. ಉತ್ತರಾಖಂಡ್ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮೊಟ್ಟಮೊದಲ ರಾಜ್ಯವಾಗಿ, ಕಾರ್ಬೆಟ್ ರಾಷ್ಟ್ರೀಯ ಅರಣ್ಯದ ಎರಡು ವಲಯಗಳಲ್ಲಿ ಸಮೀಕ್ಷೆ ನಡೆಸಿತು.
ನಿವೃತ್ತ ಅರಣ್ಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಅಧಿಕಾರಿಗಳು ಜಿಟಿಎಫ್ ಸದಸ್ಯಾರಾಗಿರುತ್ತಾರೆ.
ಜಿಟಿಎಫ್ ಕರ್ನಾಟಕದ ಅರಣ್ಯ ಅಧಿಕಾರಿಗಳೊಂದಿಗೆ ಈ ಸಮೀಕ್ಷೆಯ ಬಗ್ಗೆ ಸುಮಾರು ಸುತ್ತಿನ ಮಾತುಕತೆ ನಡೆಸಿದ್ದೂ ಉಂಟು. ಈ ವಿಚಾರವನ್ನು ಪರಿಗಣಿಸುವುದಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ ಜಯರಾಂ ಹೇಳಿದರು.
ಹುಲಿ ಸಂರಕ್ಷಿಸಲು ಕನಿಷ್ಠ ಪ್ರಮಾಣಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆಯೇ ಎಂಬುದರ ಸಮೀಕ್ಷೆ ನಡೆಸಿ, ಹುಲಿ ಮತ್ತು ಇತರೆ ಪ್ರಾಣಿಗಳ ಸಂರಕ್ಷಣೆಗಾಗಿ ಸೂಕ್ತ ಪ್ರಮಾಣಗಳನ್ನು ನಿಗಧಿಪಡಿಸಲು ಈ ಸಮೀಕ್ಷೆ ನೆರವಾಗುತ್ತದೆ. ಪ್ರವಾಸೋದ್ಯಮ ಸೇರಿ ಹಲವು ವಿಭಾಗಗಳಲ್ಲಿ ವಿಂಗಡಿಸಲಾದ ಈ ಸಮೀಕ್ಷೆಯಲ್ಲಿ ೧೭ ಅಂಶಗಳಿರುತ್ತವೆ. ಜೊತೆಗೆ, ವಲಯದ ಪ್ರಾಮುಖ್ಯತೆ, ವ್ಯವಸ್ಥಾಪನೆ, ಸಮುದಾಯದ ಸಹಭಾಗಿತ್ವ, ಪ್ರವಾಸೋದ್ಯಮ, ರಕ್ಷಣಾ ಕ್ರಮಗಳು, ವಾಸಸ್ಥಳ ನಿರ್ವಹಣೆ ಮತ್ತು ಹುಲಿ ಸಂಖ್ಯೆ ಅಂಶಗಳೂ ಸಹ ಸೇರಿವೆ.
ಈ ಸಮೀಕ್ಷೆಯು ಹುಲಿ ಸಂರಕ್ಷಿತಾರಣ್ಯಗಳ ಹೊರಗಿನ ಭಾಗಗಳಿಗೆ ಮಾಡಲಾಗುತ್ತದೆ ಎಂದು ಜಿಟಿಎಫ್ ಯೋಜನಾ ಮುಖ್ಯಸ್ಥ ಬಿಷನ್ ಸಿಂಗ್ ಬೊನಾಲ್ ತಿಳಿಸಿರು.
ಕರ್ನಾಟಕದಲ್ಲಿ – ವಿಶಿಷ್ಟವಾಗಿ ಮಡಿಕೇರಿ, ವಿರಾಜಪೇಟೆ ಮತ್ತು ಮೈಸೂರು ಸುತ್ತಮುತ್ತಲ ವಲಯಗಳಲ್ಲಿ – ಇಂತಹ ಸಮೀಕ್ಷೆ ಅತ್ಯಗತ್ಯ ಎಂದು ನಿವೃತ್ತ ಪ್ರಮುಖ ಅರಣ್ಯ ಅಧಿಕಾರಿ ಬಿ ಕೆ ಸಿಂಗ್ ತಿಳಿಸಿದರು.
