ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತಿನ ಕಾಡೊಂದರಲ್ಲಿ ಹುಲಿಯು ಕಾಣಿಸಿಕೊಂಡಿದೆ.
ಇದರೊಂದಿಗೆ ಗುಜರಾತ್, ಸಿಂಹ, ಹುಲಿ ಮತ್ತು ಚಿರತೆ – ಈ ಮೂರೂ ಕಾಡುಪ್ರಾಣಿಗಳನ್ನು ಹೊಂದಿರುವ ಭಾರತ ದೇಶದ ಏಕೈಕ ರಾಜ್ಯ ಎಂದು ಗುಜರಾತಿನ ಪ್ರಮುಖ ಅರಣ್ಯ ಸಂರಕ್ಷಣಾಧಿಕಾರಿ ಎ ಕೆ ಸಕ್ಸೇನಾ ತಿಳಿಸದರು..
ಹುಲಿಯು ಸಂತ್‌ರಾಮ್‌ಪುರ ವಲಯದಲ್ಲಿ ಕಾಡಿನಲ್ಲಿ ಕಾಣಿಸಿಕೊಂಡದ್ದು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಗುಜರಾತಿನಲ್ಲಿ ಹುಲಿಯೊಂದು ಕೊನೆಯ ಬಾರಿಗೆ ೧೯೯೨ರಲ್ಲಿ ಡಾಂಗ್ಸ್ ಗಡಿಭಾಗದಲ್ಲಿ ಕಾಣಿಸಿಕೊಂಡಿತ್ತು.
ಇಪ್ಪತ್ತೇಳು ವರ್ಷಗಳ ಬಳಿಕ, ಫೆಬ್ರುವರಿ ೯ರಂದು ಗುಜರಾತಿನ ಮಹಿಸಾಗರ್ ಜಿಲ್ಲೆಯ ಲುನಾವಾಡಾ ತಾಲೂಕಿನ ಬೊರಿಯಾ ಗ್ರಾಮದ ಬಲಿ ಹುಲಿಯೊಂದು ರಸ್ತೆ ದಾಟಿ ಕಾಡಿನೊಳಗೆ ಹೋಗುತ್ತಿದ್ದನ್ನು ಮಹೇಶ್ ಮಾಹೇರಾ ಎಂಬ ಸರ್ಕಾರಿ ಬೋಧಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದರು.
ಈ ಚಿತ್ರಗಳು ಅಂತರಜಾಲದಲ್ಲಿ ವೈರಲ್ ಆದವು. ಬೊರಿಯಾ ಗ್ರಾಮದ ಹೊರವಲಯದಲ್ಲಿ ಹುಲಿ ಹಾದುಹೋದದ್ದನ್ನು ಅರಣ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅದರ ಮಲ ಮತ್ತು ಕೂದಲು ಅಲ್ಲೇ ಸಿಕ್ಕಿದವಂತೆ. ಈ ಗ್ರಾಮದಿಂದ ಸ್ವಲ್ಪ ದೂರದಲ್ಲಿ ಮರವೊಂದರ ಮೇಲೆ ಈ ಹುಲಿಯ ಉಗುರು ಗುರುತುಗಳು ಸಿಕ್ಕಿವೆ.
ಹುಲಿಯು ಪಕ್ಕದ ರಾಜ್ಯಗಳಾದ ಮಧ್ಯಪ್ರದೇಶ ಅಥವಾ ಮಹಾರಾಷ್ಟ್ರದಿಂದ ಬಂದಿರಬಹುದೇ, ಅಥವಾ ಬಹಳ ದಿನಗಳ ಹಿಂದೆಯೇ ಗುಜರಾತಿಗೆ ಬಂದು ಬೀಡುಬಿಟ್ಟಿದೆಯೇ ಎಂಬುದನ್ನು ಅರಣ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
“ಈ ಹುಲಿ ಕಾಣಿಸಿಕೊಂಡಿರುವ ಬಗ್ಗೆ ನಾವು ನಮ್ಮ ಪಕ್ಕದಲ್ಲಿರುವ ಎಲ್ಲಾ ರಾಜ್ಯಗಳ ಅಧಿಕಾರಿಗಳಿಗೂ ಮಾಹಿತಿ ಹಂಚಿದ್ದೇವೆ. ಅಲ್ಲದೇ, ಹುಲಿ ಸಂರಕ್ಷಣೆ ಮತ್ತು ಹುಲಿಯ ವಾಸಕ್ಕೆ ತಕ್ಕಾದ ಪರಿಸರ-ಬೇಟೆ ವ್ಯವಸ್ಥೆ ಸೃಷ್ಟಿಸಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದ ನೆರವನ್ನು ಕೋರಿದ್ದೇವೆ” ಎಂದು ಗುಜರಾತ್ ಅರಣ್ಯ ಖಾತೆ ಸಚಿವ ಗಣಪತ್ ವಾಸವಾ ಹೇಳಿದರು.
ಚಿತ್ರ ಕೃಪೆ: ಮಹೇಶ್ ಮಾಹೇರಾ / ಗುಜರಾತ್ ಅರಣ್ಯ ಇಲಾಖೆ / ಟೈಮ್ಸ್ ಆಫ್ ಇಂಡಿಯಾ
Pictures Courtesy: Mahesh Mahera / Gujarat Forest Department / The Times of India
