ನಾಳೆ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆಯ ರಾಮ ಜನ್ಮಭೂಮಿ ವಿಚಾರಣೆ ನಡೆಸಲಿದೆ. ಹೀಗಿರುವಾಗ, ಭಾರತೀಯ ಜನತಾ ಪಕ್ಷದ ಹಿರಿಯ ನಾಯುಕ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಈ ನ್ಯಾಯಾಲಯದಲ್ಲಿ ಪ್ರಾರ್ಥನೆಯೊಂದನ್ನು ಸಲ್ಲಿಸಲಿದ್ದಾರೆ.
“ರಾಮ ಜನ್ಮಭೂಮಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ನನ್ನ ಮೂಲಭೂತ ಹಕ್ಕು” ಎಂದು ತಮ್ಮ ಮನವಿಯಲ್ಲಿ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಇದಕ್ಕೆಉತ್ತರವಾಗಿ, ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ಅವರು, ಮಂಗಳವಾರದಂದು ರಾಮ ಜನ್ಮಭೂಮಿ ವಿಚಾರಣೆ ನಡೆಸುವಾಗ ನ್ಯಾಯಾಲಯದಲ್ಲಿ ಹಾಜರಿರಬೇಕು ಎಂದು ಡಾ. ಸ್ವಾಮಿ ಅವರಿಗೆ ನಿರ್ದೇಶಿಸಿದರು.
“ಸಂವಿಧಾನದ ಪ್ರಕಾರ, ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಮೂಲಭೂತ ಹಕ್ಕಿದೆ. ಏಕೆಂದರೆ ರಾಮ ಅಲ್ಲಿ ಹುಟ್ಟಿದ್ದನು. ನಂಬಿಕೆಯನ್ನು ಸಂವಿಧಾನವಾಗಲೀ ಸರ್ವೋಚ್ಚ ನ್ಯಾಯಾಲಯವಾಗಲಿ ಪ್ರಶ್ನಿಸಲಾಗುವುದಿಲ್ಲ. ಅಲ್ಲಿ ಪ್ರಾರ್ಥನೆ ಸಲ್ಲಿಸಲು ನನಗೆ ಮೂಲಭೂತ ಹಕ್ಕಿನ ಬಗ್ಗೆ ನ್ಯಾಯಾಲಯವು ತೀರ್ಮಾನಿಸಬೇಕು. ನ್ಯಾಯಾಲಯವು ತೀರ್ಮಾನಿಸಿದಲ್ಲಿ ಸರ್ಕಾರವು ನನಗೆ ಈ ಹಕ್ಕನ್ನು ಒದಗಿಸಬೇಕು. ಇತರೆ ಪಕ್ಷಗಳದು ಕೇವಲ ಸ್ವತ್ತು ಮತ್ತು ನೀಡಬೇಕಾದ ಹಣ (compensation). ನಂಬಿಕೆಯ ಮೂಲಭೂತ ಹಕ್ಕು ಈ ಇತರೆ ಹಕ್ಕುಗಳಿಗಿಂತಲೂ ಮಿಗಿಲಾದದ್ದು” ಎಂದು ಡಾ. ಸ್ವಾಮಿ ಹೇಳಿದರು.
ಸರ್ವೋಚ್ಚ ನ್ಯಾಯಾಲಯವು ಜನವರಿಯಲ್ಲಿ ಅಯೋಧ್ಯೆ ರಾಮಜನ್ಮಭೂಮಿ ವಿಚಾರಣೆಯನ್ನು ಜನವರಿಯಲ್ಲಿ ನಡೆಸಬೇಕಿತ್ತು. ಆದರೆ, ಪೀಠದ ಒಬ್ಬ ಸದಸ್ಯ ನ್ಯಾಯಮೂರ್ತಿ ಎಸ್ ಎ ಬೋಬಡೆ ಅಲಭ್ಯರಾಗಿದ್ದರಿಂದ ವಿಚಾರಣೆ ಮುಂದೂಡಲಾಯಿತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ “ರಾಮಜನ್ಮಭೂಮಿ ವಿಚಾರಣೆಯನ್ನು ಕೇವಲ ಜಮೀನಿನ ವ್ಯಾಜ್ಯ ಎಂದು ಪರಿಗಣೀಸಿ ವಿಚಾರಣೆ ನಡೆಸಲಾಗುವುದು” ಎಂದು ಅಂದಿನ ಮುಖ್ಯ ನ್ಯಾಯಾಧಿಶ (ಸಿಜೆಐ) ದೀಪಕ್ ಮಿಶ್ರಾ ಅವರು ತೀರ್ಪಿತ್ತಿದ್ದರು.
