ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಆತ್ಮಾಹುತಿ ಧಾಳಿಯಲ್ಲಿ ಹುತಾತ್ಮರಾದ ೪೦ ಮಂದಿ ಸಿಆರ್‌ಪಿಎಫ್ ಯೋಧರ ಪೈಕಿ ಕರ್ನಾಟಕದ ಮಂಡ್ಯ ಜಿಲ್ಲೆಯ ಗುರು ಎಚ್ ಸಹ ಒಬ್ಬರು.
ಇಂದು ಮುಂಜಾನೆ ಸುಮಾರು ೩:೩೦ಕ್ಕೆ, ಐಎಎಫ್ ಯುದ್ಧ ವಿಮಾನಗಳು ಎಲ್‌ಓಸಿ ಗಡಿಯಾಚೆ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ತರಬೇತಿ ಶಿಬಿರಗಳ ಮೇಲೆ ಬಾಂಬ್ ಧಾಳಿ ನಡೆಸಿ, ನೂರಕ್ಕೂ ಹೆಚ್ಚು ಭಯೊತ್ಪಾಕರನ್ನು ಸಂಹಾರ ಮಾಡಿದವು.
ಈ ಸುದ್ದಿ ತಲುಪಿದೊಡನೆ, ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಸಂತಸ ವ್ಯಕ್ತಪಡಿಸಿದರು. “ನಾನು ಭಾರತೀಯ ಸೇನಾ ಪಡೆಗಳಿಗೆ ವಂದಿಸಿ, ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಮ್ಮ ಸೇನೆಯು ಮಹಾನ್ ಸೇನೆ. ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ಧಾಳಿ ನಡೆಸಲು ದೇವರು ಅವರಿಗೆ ಧೈರ್ಯ ಕೊಟ್ಟಿದ್ದಾನೆ. ಹುತಾತ್ಮರ ಆತ್ಮಕ್ಕೆ ಈಗ ಶಾಂತಿ ಸಿಗುತ್ತದೆ. ನಮ್ಮ ದೇಶ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕು. ನಮ್ಮ ದೇಶ ಪಾಕಿಸ್ತಾನಕ್ಕೆ ಅದೇನೇ ಬೆಂಬಲ-ನೆರವುಗಳನ್ನು ನೀಡಿದ್ದರೂ ಅದನ್ನು ಹಿಂಪಡೆಯಬೇಕು. ಇಂದಿನ ಐಎಎಫ್ ಬಾಂಬ್ ಧಾಳಿಯ ಫಲವಾಗಿ, ನನ್ನ ಪತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ ಅಂತ ಅನಿಸುತ್ತದೆ. ನನಗೆ ಸಂತೋಷವಾಗಿದೆ”
ಗುರು ಅವರ ಸಹೋದರ ಆನಂದ್ ಹೇಳಿದ್ದು, “ಮಧ್ಯರಾತ್ರಿ ಪಾಕಿಸ್ತಾನದ ಮೇಲೆ ಬಾಂಬ್ ಧಾಳಿ ನಡೆಸಿದ ಸೇನಾ ಪಡೆಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಪಾಕಿಸ್ತಾನದಿಂದ ಆದ ಅನ್ಯಾಯಗಳಿಂದ ಸೇನೆಯ ಇತರ ಕುಟುಂಬಗಳಿಗೆ ನಷ್ಟ ಆಗಬಾರದು. ಪಾಕಿಸ್ತಾನದಲ್ಲಿ ಅವಿತುಕೊಂಡಿರುವ ಎಲ್ಲಾ ಭಯೋತ್ಪಾದಕರನ್ನು ನಮ್ಮ ಸರ್ಕಾರವು ಸಂಹಾರ ಮಾಡಬೇಕು. ಇದನ್ನು ಮಾಧ್ಯಮಗಳಲ್ಲಿ ಎತ್ತಿ ತೋರಿಸಬೇಕು. ನಮ್ಮ ದೇಶದ ಮೇಲೆ ದಾಳಿ ಮಾಡಿದಲ್ಲಿ ಸರ್ಕಾರ ಏನೇನು ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗಬೇಕು.”
ಚಿತ್ರ ಕೃಪೆ: The Hindu
