ಈಗಾಗಲೇ ಹಲವು ಪರಿಸರ ಸಂಘಟನಗಳು, ಗುಂಪುಗಳು ಮತ್ತು ವ್ಯಕ್ತಿಗಳು ನಮ್ಮ ಸಮೃದ್ಧ ಜೀವಿಕ ವೈವಿಧ್ಯ, ಕಾಡು, ಜಲಮೂಲ ಹಾಗೂ ಬಹಳ ಮುಖ್ಯವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಹೋರಾಡುತ್ತಿದ್ದಾರೆ.
ಆದರೆ ಇದೀಗ ಇವೆಲ್ಲವೂ, ಎಲ್ಲರೂ ಹೊಸ ಒಕ್ಕೂಟದಡಿ ಒಟ್ಟಿಗೆ ಸೇರಿ ಮುಂದಿನ ಪೀಳಿಗೆಗಾಗಿ ನಮ್ಮ ಪರಿಸರವನ್ನು ಸಂರಕ್ಷಿಸಲು ತೀರ್ಮಾನಿಸಿವೆ.
ಈ ಒಕ್ಕೂಟದ ಹೆಸರು “ಸಂಯುಕ್ತ ಸಂರಕ್ಷಣಾ ಅಭಿಯಾನ (ಯುಸಿಎಂ)” (United Conservation Movement) (UCM) ಏಕೆಂದರೆ ಸದರಿ ಸಂಘಟನೆ-ಗುಂಪು-ವ್ಯಕ್ತಿಗಳು ಬೇರೆ-ಬೇರೆಯಾಗಿದ್ದರೂ ಧ್ಯೇಯವು ಒಂದೇ.
ಯುಸಿಎಂ ಅಡಿ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿರುವ ಸುಮಾರು ೩೨ ಸಂಘಟನೆಗಳು ಒಟ್ಟು ಸೇರಿ, “ಮರಗಳಿಲ್ಲದೆ ನೀರಿಲ್ಲ” ಎಂಬ ಘೋಷಣೆಯೊಂದಿಗೆ ೨೩/೦೨/೨೦೧೯ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸೇರಲಿವೆ.
“ನಾವು ಅಭಿವೃದ್ದಿ ವಿರೋಧಿಗಳಲ್ಲ, ಆದರೆ ಅಭಿವೃದ್ಧಿ ಯೋಜನೆಗಳು ಕಟ್ಟುನಿಟ್ಟಾಗಿ ಕಾಡಿನ ಪ್ರದೇಶಗಳ ಹೊರಗೆಯೇ ನಡೆಯಬೇಕು. ಜೊತೆಗೆ, ಮರಗಳನ್ನು ಕಡಿದು ಚತುಷ್ಪಥ ಹೆದ್ದಾರಿಗಳನ್ನು ನಿರ್ಮಿಸುವ ಬದಲು ಇರುವ ರಸ್ತೆಗಳನ್ನೇ ಉತ್ತಮಗೊಳಿಸಬೇಕು ಎಂಬುದು ನಮ್ಮ ಬೇಡಿಕೆ” ಎಂದು ಯುಸಿಎಂ ಸದಸ್ಯರು ತಿಳಿಸಿದ್ದಾರೆ.
