೨೦೧೨ರ ಡಿಸೆಂಬರ್ ೧೬ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ “ನಿರ್ಭಯಾ” (ನಿಜ ಹೆಸರು ಜ್ಯೋತಿ ಸಿಂಗ್ ಪಾಂಡೆ) ಅವರ ಪೋಷಕರು, ನಾಲ್ವರೂ ದೋಷಿಗಳಿಗೆ ಶಿಕ್ಷೆ ವಿಧಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ದೆಹಲಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾರ್ಚ್ ೨ರಂದು ಇದರ ಬಗ್ಗೆ ವಿಚಾರಣೆ ನಡೆಯಲಿದೆ.
೨೦೧೮ರ ಡಿಸೆಂಬರ್ ೧೨ರಂದು, ವಕೀಲ ಅಲಖ ಅಲೋಕ್ ಶ್ರೀವಾಸ್ತವ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಆ ನಾಲ್ವರೂ ದೋಷಿಗಳಾದ ಮುಖೇಶ್, ಪವನ್, ವಿನಯ್ ಮತ್ತು ಅಕ್ಷಯ್ ಅವರಿಗೆ ವಿಧಿಸಲಾದ ಗಲ್ಲುಶಿಕ್ಷೆ ಪ್ರಕ್ರಿಯೆ ನಡೆಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಇದನ್ನು ತಿರಸ್ಕರಿಸಿತು.
ಮುಖೇಶ್, ಪವನ್ ಮತ್ತು ವಿನಯ್ ದೆಹಲಿ ಉಚ್ಚ ನ್ಯಾಯಾಲಯದ ಮರಣದಂಡನಾ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯನ್ನು ೨೦೧೮ರ ಜುಲೈ ತಿಂಗಳಲ್ಲಿ ತಿರಸ್ಕರಿಸಲಾಯಿತು.
೨೦೧೨ರ ಡಿಸೆಂಬರ್ ೧೬ರ ರಾತ್ರಿ ನಡೆದ ಆ ಕರಾಳ ಘಟನೆಯ ನಂತರ ಸಾರ್ವಜನಿಕ ಆಕ್ರೋಶ ವ್ಯಕ್ತವಾಯಿತು. ಕೇಂದ್ರ ಸರ್ಕಾರವು ಅತ್ಯಾಚಾರ ವಿರೋಧಿ ಕಾನೂನನ್ನು ಗಟ್ಟಿಗೊಳಿಸುವಂತಾಯಿತು.