ಶ್ರೀ ಸಿದ್ಧಲಿಂಗ ಸ್ವಾಮಿಗಳು ಡಾ. ಶ್ರೀ ಶಿವಕುಮಾರ ಸ್ವಾಮಿಗಳ ಉತ್ತರಾಧಿಕಾರಿಯಾಗಿ, ತುಮಕೂರಿನಲ್ಲಿರುವ ಸಿದ್ಧಗಂಗಾ ಮಠದ ಅಧ್ಯಕ್ಷರಾದರು. ಹಲವು ದಶಕಗಳ ಕಾಲ ಧಾರ್ಮಿಕ ಮತ್ತು ತ್ರಿವಿಧ ದಾಸೋಹಕ್ಕೆ ಅಪಾರ ಸೇವೆ ಸಲ್ಲಿಸಿದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಕಳೆದ ಸೋಮವಾರದಂದು ಶಿವೈಕ್ಯರಾದರು.
ಶ್ರೀ ಸಿದ್ಧಲಿಂಗ ಸ್ವಾಮಿಗಳು “ಬೋಧಿವೃಕ್ಷ”ಕ್ಕಾಗಿ ಬರೆದ ಅಂಕಣವೊಂದರ ಆಯ್ದ ಭಾಗಗಳು ಇಲ್ಲಿವೆ:
ಹಲವು ದಶಕಗಳ ಕಾಲ ಸ್ವಾಮೀಜಿಯವರೊಂದಿಗೆ ಇದ್ದು, ಅವರ ಅತ್ಯಮೂಲ್ಯ ಮಾರ್ಗದರ್ಶನ ಪಡೆದ ನಂತರ, ಅವರು ನಮ್ಮೊಂದಿಗಿಲ್ಲ ಎನ್ನುವ ವಾಸ್ತವವು ತುಂಬಲಾರದ ನಷ್ಟ ಸೃಷ್ಟಿಸಿದೆ. ಸ್ವಾಮಿಗಳು ಅನಾರೋಗ್ಯ ಪೀಡಿದರಾಗಿದ್ದಾಗಲೂ, ಶ್ರೀಮಠದಲ್ಲಿರುವ ಮಕ್ಕಳ ಯೋಗಕ್ಷೇಮದ ಬಗ್ಗೆ ಕಾಳಜಿ ತೋರಿಸುತ್ತಿದ್ದರು. “ಮಕ್ಕಳಿಗೆ ಸರಿಯಾದ ಸಮಯಕ್ಕೆ ಪ್ರಸಾದ, ತಿಂಡಿ-ಊಟಗಳು ವಿನಿಯೋಗವಾಗುತ್ತಿವೆಯೇ? ಅವರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿದಯೇ?” ಎಂದೆಲ್ಲ ವಿಚಾರಿಸುತ್ತಿದ್ದರು.
ಸ್ವಾಮಿಗಳು ಮಠದಲ್ಲಿರುವ ಹಸುಗಳತ್ತ ಅಷ್ಟೇ ಪ್ರೀತಿ ತೋರಿಸುತ್ತಿದ್ದರು. ಅವುಗಳೊಂದಿಗೆ ಒಡನಾಟವನ್ನು ಬೆಳೆಸಿಕೊಂಡಿದ್ದರು. ಮಠದ ಪ್ರತಿಯೊಂದು ವಿಭಾಗದಲ್ಲಿನ ಆಗುಹೋಗುಗಳ ಬಗ್ಗೆ ಅತೀವವಾದ ಕಾಳಜಿ ಹೊಂದಿದ್ದರು.
ಸ್ವಾಮಿಗಳು ಮಕ್ಕಳತ್ತ ಪ್ರೀತಿ ತೋರಿಸುವುದು ಮಾತ್ರವಲ್ಲ, ಅಲ್ಲಿರುವ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುತ್ತಿದ್ದರು. ನನ್ನನ್ನು ಸಹ “ಏನು ಸ್ವಾಮಿಗಳೇ, ಹೇಗಿದ್ದೀರ? ಇಲ್ಲಿ ಯಾವ ಕೊರತೆಯೂ ಇಲ್ಲ. ನಿಮಗೆ ಸರಿಯೆನಿಸಿದ್ದನ್ನು ಚೆನ್ನಾಗಿ ನಡೆಸಿಕೊಂಡು ಹೋಗಿ ಸಾಕು” ಎನ್ನುತ್ತಿದ್ದರು. ನನ್ನ ಮೇಲೆ ಅವರಿಗಿದ್ದ ಭರವಸೆಗೆ ಈ ಮಾತೇ ಸಾಕ್ಷಿ.
ಅವರು ಎಂದಿಗೂ ಕೋಪಿಸಿಕೊಂಡದ್ದೇ ಇಲ್ಲ. ಅಪ್ಪಿ ತಪ್ಪಿ ತೋರಿಸಿದ್ದರೂ, ತಾಯಿ ಮಗುವನ್ನು ತಿದ್ದುವ ಪರಿಯಂತಿತ್ತು. ಅವರ ಮಾತುಗಳೇ ನನಗೆ ಶ್ರೀರಕ್ಷೆ. ನಾನು ಅವರ ನೆರಳಿನಲ್ಲೇ ಮುಂದುವರೆಯಲು ಬಯಸುತ್ತೇನೆ. ಎಂದಿಗೂ ನನ್ನತನವನ್ನು ತೋರಿಸುವ ಬಯಕೆಯಿಲ್ಲ.
ನಾನು ಶ್ರೀಮಠವನ್ನು ಸೇರಿದಾಗ ಶ್ರೀಗಳು ಆಗಲೇ “ತ್ರಿವಿಧ ದಾಸೋಹಿ”ಯಾಗಿದ್ದರು. ಅವರು ನಮ್ಮ ಮೇಲೆ ಅಪಾರ ಜವಾಬ್ದಾರಿ ಇಟ್ಟುಹೋಗಿದ್ದಾರೆ. ಸಿದ್ಧಗಂಗಾ ಮಠದವರಾದ ನಾವು ಅವರ ಮಾರ್ಗದರ್ಶನದೊಂದಿಗೆ ಮುನ್ನಡೆಯುವೆವು. ಇದೇ ಅವರಿಗೆ ಗೌರವ ತೋರಿಸುವ ಉತ್ತಮ ರೀತಿ.
“ಸಂದರ್ಭಕ್ಕೆ ತಕ್ಕಂತೆ ಯೋಜಿಸಿ, ವಿವೇಕಪೂರ್ಣವಾಗಿ ನಡೆಯಬೇಕು” ಎಂದು ಸ್ವಾಮೀಜಿಯವರು ಆಗಾಗ್ಗೆ ನಮಗೆ ಹೇಳುತ್ತಿದ್ದರು.
ಸ್ವಾಮೀಜಿಯವರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿದ್ದಾಗ ಅವರು ಶ್ರೀ ಆದಿಚುಂಚನಗಿರಿ ಮಠದ ಅಂದಿನ ಮುಖ್ಯಸ್ಥ ಶ್ರೀಬಾಲಗಂಗಾಧರನಾಥ ಸ್ವಾಮಿಗಳೊಂದಿಗೆ ಮಾತನಾಡುತ್ತಾ, “ ಯಾರೂ ಇಲ್ಲಿ ಶಾಶ್ವತವಾಗಿ ಇರಲಿಕ್ಕಾಗುವುದಿಲ್ಲ. ಎಲ್ಲರು ಒಂದಲ್ಲ ಒಂದು ದಿನ ಹೋಗಲೇಬೇಕು” ಎಂದಿದ್ದರು.
ಸ್ವಾಮೀಜಿಯವರ ಅಪಾರ ಆಧ್ಯಾತ್ಮಿಕ ಶಕ್ತಿ, ಕಾಯಕ, ತಪಸ್ಸು, ದಾಸೋಹ, ಪ್ರೀತಿ, ಕೋಟ್ಯಾಂತರ ಭಕ್ತರಿಂದ ಗೌರವ – ಇವೆಲ್ಲವೂ ಅವರ ದೀರ್ಘಾಯುಷ್ಯದ ಹಿಂದಿನ ಗುಟ್ಟುಗಳಲ್ಲಿ ಕೆಲವು.
ಸ್ವಾಮಿಗಳು ತಮ್ಮ ಆಧಾರಗಳಿಂದಲೇ ಸಿದ್ಧಗಂಗಾ ಮಠವನ್ನು ಕಟ್ಟಿ ಬೆಳೆಸಿದರು. ಅವರು ಶಿಕ್ಷಣ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದರು. ಸ್ವಾಮೀಜಿಯವರು ಎಂದಿಗೂ ವಿಶ್ರಾಂತಿ ಬಯಸಿದವರೇ ಅಲ್ಲ. ಮಾಡುವ ಕೆಲಸದಲ್ಲಿ ಬದಲಾವಣೆಯಾದರೆ ಅದೇ ವಿಶ್ರಾಂತಿ ಎನ್ನುತ್ತಿದ್ದರು.
ಸ್ವಾಮಿಗಳು ಶ್ರೀಮಠಕ್ಕೆ ಅಪಾರ ಭಕ್ತ ಸಂಪತ್ತನ್ನು ಕೊಟ್ಟು ಹೋಗಿದ್ದಾರೆ. ಅದಕ್ಕಿಂತಲೂ ಹಿರಿದಾದ ಸಂಪತ್ತುಇನ್ನೇನಿದೆ? ಅವರ ಅನುಗ್ರಹ, ಆಶೀರ್ವಾದವೇ ನಮಗೆ ಶ್ರೀರಕ್ಷೆ.
ಚಿತ್ರಕೃಪೆ: “ಬೋಧಿವೃಕ್ಷ”
ಲೇಖನ: ಶ್ರೀ ಸಿದ್ಧಲಿಂಗ ಸ್ವಾಮಿಗಳು
ನಿರೂಪಣೆ: ಆಸೋಕ್ ಆರ್ ಪಿ
