ಬಹುರಾಷ್ಟ್ರೀಯ ಸಂಸ್ಥೆ ಮೈಕ್ರೊಸಾಫ್ಟ್ ಕ್ಲೌಡ್ ಸರ್ವೀಸಸ್ ವ್ಯವಸ್ಥೆಗಾಗಿ ಬೆಂಗಳೂರಿನ ದೂರವಾಣಿ ನಗರದಲ್ಲಿರುವ ಐಟಿಐ ಲಿಮಿಟೆಡ್ ಒಂದಿಗೆ ಮಾತುಕತೆ ನಡೆಸುತ್ತಿದೆ. ಈ ಮಾಹಿತಿಯನ್ನು ಐಟಿಐ ಲಿಮಿಟೆಡ್‌ನ ಅಧ್ಯಕ್ಷ ಕೆ ಅಲಗೇಶನ್ ತಿಳಿಸಿದರು.
ಐಟಿಐ ಲಿಮಿಟೆಡ್ – ಭಾರತದ ಮೊಟ್ಟಮೊದಲ ಸಾರ್ವಜನಿಕ ಕೈಗಾರಿಕಾ ಉದ್ಯಮ (ಪಿಎಸ್‌ಯು) – ಇತ್ತೀಚೆಗೆ ತನ್ನ ಬೆಂಗಳೂರು ಕೇಂದ್ರದಲ್ಲಿ ೧,೦೦೦ ಗೂಡುಗಳುಳ್ಳ ದತ್ತಾಂಶ ಕೇಂದ್ರವನ್ನು ನಿರ್ಮಿಸಿತು.
ಬ್ಯಾಂಕ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಂತರಜಾಲ ಮತ್ತು ತಂತ್ರಾಂಶಗಳನ್ನು ಬಳಸುವ ಸ್ಥಳೀಯ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಬ್ಯಾಂಕ್ ಮತ್ತು ಅಂತರಜಾಲ ಉದ್ದಿಮೆಗಳು ಕ್ಲೌಡ್ ಸರ್ವೀಸಸ್ ಕ್ಷೇತ್ರಗಳ ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ಬಳಸಲು ಮುಂದಾಗಿವೆ.
ಈಗಾಗಲೇ ಮೈಕ್ರೊಸಾಫ್ಟ್, ಅಮೆಜಾನ್ ವೆಬ್ ಸರ್ವೀಸಸ್, ಗೂಗಲ್ ಮತ್ತು ಅಲಿಬಾಬಾ ಭಾರತದಲ್ಲಿ ದತ್ತಾಂಶ ಕೇಂದ್ರಗಳನ್ನು ಹೊಂದಿ, ಗ್ರಾಹಕರಿಗೆ ಕ್ಲೌಡ್ ಸರ್ವೀಸಸ್ ವ್ಯವಸ್ಥೆಯ ಸೌಲಭ್ಯ ನೀಡುತ್ತಿವೆ. ಭಾರತದ ಉದ್ದಗಲಕ್ಕೂ ಈಗಾಗಲೇ ಸುಮಾರು ೧೫೦ ದತ್ತಾಂಶ ಕೇಂದ್ರಗಳಿವೆ.
ಭಾರತೀಯ ರಿಸರ್ವ್ ಬ್ಯಾಂಕ್, ಜಾಗತಿಕ ಪಾವತಿ ಉದ್ದಿಮೆಗಳಾದ ವೀಸಾ, ಮಾಸ್ಟರ್‌ಕಾರ್ಡ್ ಮತ್ತು ಗೂಗಲ್‌ಪೇ ದತ್ತಾಂಶವನ್ನು ಸ್ಥಳೀಯವಾಗಿ ಶೇಖರಿಸಬೇಕು ಎಂಬ ನಿಯಮವನ್ನು ತಂದಿತು. ದತ್ತಾಂಶ ರಕ್ಷಣಾ ಮಸೂದೆಯೂ ಸಹ ಅತ್ಯಮೂಲ್ಯ ವೈಯಕ್ತಿಕ ಮಾಹಿತಿಯನ್ನು ಸ್ಥಳೀಯವಾಗಿ ಶೇಖರಿಸಬೇಕು ಎಂದು ಶಿಫಾರಸು ಮಾಡಿದೆ.
ಮೈಕ್ರೊಸಾಫ್ಟ್ ಭಾರತದಲ್ಲಿ ಮೂರು ಕ್ಲೌಡ್ ವಲಯಗಳನ್ನು ಹೊಂದಿದೆ. ಆಫಿಸ್೩೬೫ ಹಾಗೂ ಅಝೂರ್ ಕ್ಲೌಡ್ ಸರ್ವೀಸಸ್ ಸೇವೆಗಳನ್ನು ಸ್ಥಳೀಯವಾಗಿ ಗ್ರಾಹಕರಿಗೆ ನೀಡುತ್ತಿದೆ.
ಅಝೂರ್ ಕ್ಲೌಡ್ ಸರ್ವೀಸಸ್‌ಗಾಗಿ ಐಟಿಐ ಜೊತೆ ವ್ಯವಹರಿಸಲು ಮೈಕ್ರೊಸಾಫ್ಟ್ ಒಬ್ಬ ಸ್ಥಳೀಯ ಕ್ಲೌಡ್ ಸರ್ವೀಸಸ್ ಉದ್ದಿಮೆಯನ್ನು ನಿಯೋಜಿಸಲಿದೆ.
ಇದು ಕುದುರಿದಲ್ಲಿ ಮಾರ್ಚ್ ತಿಂಗಳ ಅಂತ್ಯದೊಳಗೆ ೧೯,೦೦೦ ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳು ಬರಬಹುದು ಎಂದು ಅಲಗೇಶನ್ ಹೇಳಿದ್ದಾರೆ.
೧೯೪೮ರಲ್ಲಿ ಸ್ಥಾಪನೆಯಾದ ಐಟಿಐ ಲಿಮಿಟೆಡ್ ಅಂದು “ಇಂಡಿಯನ್ ಟೆಲೊಪೋನ್ ಇಂಡಸ್ಟ್ರೀಸ್” ಎನ್ನಲಾಗುತ್ತಿತ್ತು. ಮೊದಲ ೩೦ ರಿಂದ ೪೦ ದಶಕಗಳಲ್ಲಿ ಸ್ಥಳೀಯ ದೂರವಾಣಿ ಉಪಕರಣಗಳು ಮತ್ತು ಬಿಡಿಬಾಗಗಳು, ದೂರವಾಣಿ ಎಕ್ಸ್‌ಚೇಂಜ್ ಯಂತ್ರಗಳನ್ನು ತಯಾರಿಸುತ್ತಿತ್ತು. ೧೯೯೦ರಿಂದ ಹಿಡಿದು ೨೦೧೫ ರ ತನಕ ಐಟಿಐ ನಷ್ಟದಲ್ಲಿ ಮುಳುಗಿತ್ತು. ಕೇಂದ್ರ ಸರ್ಕಾರವು “ಪುನರುತ್ಥಾನ ಸಹಾಯ” ಮಾಡಿದ ಫಲವಾಗಿ ಐಟಿಐ ಮತ್ತೆ ತನ್ನ ವ್ಯವಹಾರ ನಡೆಸುತ್ತಿದೆ. ಈಗ ಮೊಬೈಲ್ ಸಿಂ ಕಾರ್ಡ್, ಲಘು ಕಂಪ್ಯೂಟರ್ ಹಾಗೂ ರಕ್ಷಣಾ ಇಲಾಖೆಗಾಗಿ ಉತ್ಪನ್ನಗಳನ್ನು ತಯಾರಿಸುತ್ತಿದೆ.
