“ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ. ಅವನ ಅರೋಗ್ಯ ಸರಿಯಿಲ್ಲ. ತನ್ನ ಮನೆ ಬಿಟ್ಟು ಹೋಗಲಿಕ್ಕೂ ಆಗುವುದಿಲ್ಲ. ಇದೇ ನನ್ನಲ್ಲಿರುವ ಮಾಹಿತಿ” ಎಂದು ಪಾಕಿಸ್ತಾನದ ವಿದೇಶ ವ್ಯವಹಾರ ಮಂತ್ರಿ ಶಾಹ್ ಮೊಹಮ್ಮದ್ ಖುರೇಷಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
“ಅವನ ವಿರುದ್ಧ ದೃಢ ಸಾಕ್ಷ್ಯಗಳಿದ್ದರೆ ನಮ್ಮೊಂದಿಗೆ ಹಂಚಿ, ನಾವು ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಖುರೇಷಿ ಭಾರತಕ್ಕೆ ಸಂದೇಶ ತಿಳಿಸಿದರು.
ಶಾಂತಿಗಾಗಿ ಅವಕಾಶ ಕಲ್ಪಿಸಲು ಪಾಕಿಸ್ತಾನವು ತನ್ನ ಬಂಧನದಲ್ಲಿರುವ ಐಎಎಫ್ ಯುದ್ಧವಿಮಾನ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನು ಇಂದು ಬಿಡುಗಡೆಗೊಳಿಸುದಾಗಿ ಖುರೇಷಿ ಹೇಳಿದರು.
ಈ ಸಂದರ್ಶನದಲ್ಲಿ ಖುರೇಷಿ ಭಾರತ-ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳನ್ನು ಅಲ್ಲಗಳೆದರು.
ಫೆಬ್ರುವರಿ ೧೪ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಸಿಆರ್‌ಪಿಎಫ್ ಯೋಧರ ಮೇಲೆ ಆತ್ಮಾಹುತಿ ಧಾಳಿ ನಡೆಸಿದರು. ೪೦ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಇದಕ್ಕೆ ಪ್ರತೀಕಾರವಾಗಿ ಭಾರತದ ಐಎಎಫ್ ಯುದ್ಧವಿಮಾನಗಳು ಪಾಕಿಸ್ತಾನದಲ್ಲಿರುವ ಪ್ರಮುಖ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಿ, ಬಹಳಷ್ಟು ಭಯೋತ್ಪಾದಕರನ್ನು ಸಂಹಾರ ಮಾಡಿದವು.
