ಕುವೈತ್ ವಿಶ್ವದ ಅತ್ಯುದ್ದದ ರಾಷ್ಟ್ರಧ್ವಜವನ್ನು ರಚಿಸಿ ಗಿನ್ನೆಸ್ ದಾಖಲೆ ತನ್ನದಾಗಿಸಿಕೊಂಡಿದೆ. ಧ್ವಜದ ಉದ್ದ ಬರೋಬ್ಬರಿ ೨,೦೧೯ ಮೀಟರುಗಳು.
ಗಿನ್ನೆಸ್ ವಿಶ್ವದಾಖಲೆಯಲ್ಲಿ ದಾವೆ ಹೂಡಲು, ೪,೦೦೦ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಧ್ವಜವನ್ನು ಹಿಡಿದು ನಿಂತರು. ಕುವೈತ್‌ನ ೫೮ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ಈ ಧ್ವಜವನ್ನು ಪ್ರದರ್ಶಿಸಲಾಯಿತು.
ಈ ಸಮಾರಂಭದಲ್ಲಿ ರಕ್ಷಣಾ ಇಲಾಖೆ, ಅಂತರಿಕ ಮಂತ್ರಾಲಯ, ಅಗ್ನಿಶಾಮಕ ಇಲಾಖೆ, ಪುರಸಭೆ, ಲೋಕೋಪಯೋಗಿ ಮಂತ್ರಾಲಯ, ಸೂಚನೆ ಮತ್ತು ಪ್ರಸಾರ ಮಂತ್ರಾಲಯ ಹಾಗೂ ಇತರೆ ಸಂಸ್ಥೆಗಳು ಪಾಲ್ಗೊಂಡವು.
ಇದಕ್ಕೆ ಮುಂಚೆ, ಕುವೈತ್ ೨೦೧೬ರ ಫೆಬ್ರುವರಿ ತಿಂಗಳಲ್ಲಿ ವಿಶ್ವದ ಅತ್ಯುದ್ದ ಧ್ವಜದ ದಾಖಲೆ ತನ್ನದಾಗಿಸಿಕೊಂಡಿತು. ಮಿನಾ ಅಬ್ದುಲ್ಲಾ ನಗರದಲ್ಲಿ ನಡೆದ ಸಮಾರಂಭವೊಂದರಲ್ಲಿ ರಿಮೋಟ್-ಚಾಲಿತ ವಿಮಾನವು ರಾಷ್ಟ್ರಧ್ವಜವನ್ನು ಹಾರಿಸಿಕೊಂಡು ಹೋಗಿತ್ತು. ಕುವೈತ್ ದೇಶವು ಧ್ವಜಕ್ಕೆ ಸಂಬಂಧಿತ ಇತರೆ ವಿಶ್ವದಾಖಲೆಗಳನ್ನು ರಚಿಸಿದೆ.
ಕಳೆದ ಡಿಸೆಂಬರ್‌ನಲ್ಲಿ, ಮೂವರು ಕುವೈತ್ ಭೂಸೇನಾಧಿಕಾರಿಗಳು ೬೩ ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹಿಡಿದು ೧೩,೦೦೦ ಅಡಿ ಎತ್ತರದಿಂದ ಜಿಗಿದರು (ಸ್ಕೈಡೈವಿಂಗ್). ಅದೇ ತಿಂಗಳು, ಷೆವೊಲೆ ವಾಹನವೊಂದು ೪೩೩ ಚದರ ಮೀಟರ್ ಗಾತ್ರದ ಬಾವುಟವನ್ನು ಭೂಮಿಗೆ ತಾಕಿಸದೆ ೧೦೦ ಮೀಟರ್ ದೂರದ ತನಕ ಎಳೆದಿತ್ತು.
