ಚಿತ್ರದುರ್ಗದಿಂದ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ವರೆಗಿನ ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅಗತ್ಯವಿದ್ದೇ ಇದೆ.
ಭೈರಾಪುರ-ಶಿಶಿಲ ನಡುವಿನ ರಸ್ತೆ ಕಾಮಗಾರಿಗೆ ಮಾತ್ರ ನಾವು ಆಕ್ಷೇಪ ವ್ಯಕ್ತಪಡಿಸುತಿದ್ದೇವೆ.
ವಿಲ್ಲುಪುರಂನಿಂದ ಮಂಗಳೂರಿಗೆ ಸಾಗಲಿರುವ ಹೆದ್ದಾರಿಗೆ ಚಿತ್ರದುರ್ಗದಿಂದ ಬರುವ ರಸ್ತೆಯನ್ನು ಮೂಡಿಗೆರೆ ಬಳಿ ಜೋಡಿಸಿದಲ್ಲಿ, ಮತ್ತು ಮುಂದುವರೆದ ರಸ್ತೆಯು ಈಗಾಗಲೇ ಇರುವ ಚಾರ್ಮಾಡಿ ಮಾರ್ಗವಾಗಿ ಸಾಗಿದಲ್ಲಿ ಎರಡೂ ಯೋಜನೆಗಳ ಸದುಪಯೋಗ ಆಗಲಿದೆ ಮತ್ತು ಭೈರಾಪುರ-ಶಿಶಿಲ ನಡುವಿನ ಕಾಡನ್ನು ಉಳಿಸಿಕೊಳ್ಳಬಹುದು.
ಇದೊಂದು ರೀತಿಯಲ್ಲಿ win-win ಸನ್ನಿವೇಶ.
ಸಾರಾಸಗಟಾಗಿ ಇಡೀ ಯೋಜನೆಯನ್ನೇ ತಿರಸ್ಕರಿಸುವುದು ಸರಿಯಲ್ಲ.
ಚಾರ್ಮಾಡಿ ಘಾಟಿನಲ್ಲಿ ಬೆಟ್ಟದ ಬದಿಯನ್ನು ವಿಚಲಿತಗೊಳಿಸದೇ, ಕಣಿವೆ ಬದಿಯನ್ನು ಆಧಾರಕಂಬಗಳ ಸಹಾಯದಿಂದ ವಿಸ್ತರಿಸಿ ಅತ್ಯದ್ಭುತ ಪ್ರವಾಸೀಮಾರ್ಗವನ್ನಾಗಿ ಅಭಿವೃದ್ಧಿಪಡಿಸಬಹುದು.
ಹಾಗೆಯೇ, ವಿದೇಶಗಳಲ್ಲಿ ಮರಗಳನ್ನು ಬೇರುಸಹಿತ ಸ್ಥಳಾಂತರಿಸಿ ಮರುನಾಟಿ ಮಾಡುತ್ತಾರೆ.
ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ನಿಂದ ಕೊಟ್ಟಿಗೆಹಾರದ ವರೆಗೂ ರಸ್ತೆ ಅಗಲೀಕರಣ ಕಾಮಗಾರಿಯಿಂದ ಹತ್ಯೆಯಾಗಲಿರುವ ಮರಗಳಲ್ಲಿ ಕೆಲವನ್ನಾದರೂ ಉಳಿಸಿಕೊಳ್ಳಲು ಸಾಧ್ಯವೇ? ಪ್ರಯತ್ನಿಸೋಣ.
ಹೊಸದಾಗಿ ಗುರುತು ಮಾಡಲ್ಪಡುವ ರಸ್ತೆ ಅಂಚಿಗೆ ಇದೇ ಮರಗಳನ್ನು ಪುನಹ ನೆಡಲು ನಮ್ಮ ಸಂಸ್ಥೆ ನೇಚರ್ ಕ್ಲಬ್ ಉತ್ಸುಕವಾಗಿದೆ.
ಸಾಗಿಸಿ, ಮರುನಾಟಿಮಾಡಲು ಸಾಧ್ಯವಿರುವ ಮರಗಿಡಗಳನ್ನು ಕಾಪಾಡಲು ಒಂದು ಪ್ರಯತ್ನ ಮಾಡಬಹುದೇ?
ವಿದೇಶದ ಸಾಧನೆಗಳನ್ನುವಾಟ್ಸಪ್ನನ ವೀಡಿಯೋದಲ್ಲಿ ನೋಡಿರುತ್ತೇವೆ. ನಾವೇ ಯಾಕೆ ಮಾಡಿನೋಡಬಾರದು? ನಾವಿದನ್ನು ಮಾಡಿದಲ್ಲಿ, ನಮ್ಮ ಜಿಲ್ಲೆ ಹಲವಾರು ಸ್ವಯಂಸೇವಾ ಸಂಸ್ಥೆಗಳಿಗೆ ಮಾದರಿಯಾಗುತ್ತೇವೆ.
ರಸ್ತೆಬದಿಯ ಮರಗಳು ಇಡೀ ಸಮುದಾಯದ ಸೊತ್ತು ಎಂಬ ಸತ್ಯವನ್ನು ಅರಿತು ವಿವೇಚನೆಯಿಂದ ಈ ಸಂಗತಿಯನ್ನು ನಿರ್ವಹಿಸುವುದು ಅಗತ್ಯ.
ಸರ್ಕಾರ ಆ ಮರಗಳನ್ನು ಟಿಂಬರ್‌ನವರಿಗೆ ಮಾರದೇ ಮರುನಾಟಿಗೆ ಅವಕಾಶ ಮಾಡಿಕೊಡಬೇಕು, ನೆಡಲು ಸ್ಥಳಾವಕಾಶವನ್ನೂ ನೀಡಬೇಕು.
ರಸ್ತೆ ನಿರ್ಮಾಣ ಮಾಡುವುದಕ್ಕಿಂತಲೂ, ನಿರ್ಮಾಣದ ನೆಪದಲ್ಲಿ ರಸ್ತೆಬದಿಯ ಮರಗಳನ್ನು ಲೂಟಿ ಮಾಡಲು ತೀರಾ ಉತ್ಸುಕರಾಗಿದ್ದಾರೆ ಎಂಬ ಸಾರ್ವತ್ರಿಕ ಟೀಕೆಯನ್ನು ತಪ್ಪೆಂದು ಸಾಬೀತು ಮಾಡಲು ಸಂಬಂಧಿತ ಇಲಾಖೆಗಳಿಗೆ ಇದೊಂದು ಸದವಕಾಶ.
ಅತಿಥಿ ಲೇಖಕರು:
ಧನಂಜಯ ಜೀವಾಳ ಬಿ. ಕೆ.
ನೇಚರ್ ಕ್ಲಬ್, ಮೂಡಿಗೆರೆ.
