ಕನ್ನಡ

೩ ಶತಕೋಟಿಯ ಊಟ ಬಡಿಸಿ ಇತಿಹಾಸ ಬರೆದ ಅಕ್ಷಯ ಪಾತ್ರ ಸಂಸ್ಥಾನ

ವೃಂದಾವನ್‌ನಲ್ಲಿರುವ ಅಕ್ಷಯ ಪಾತ್ರಸಂಸ್ಥಾನವು ಇಂದು ಮಕ್ಕಳಿಗೆ ೩ ಶತಕೋಟಿಯ ಊಟ ಬಡಿಸುವುದರ ಮೂಲಕ ಇತಿಹಾಸ ಸೃಷ್ಟಿಸಿದೆ.

ಈ ವಿಶೇಷ ದಿನದಂದು ವೃಂದಾವನ್‌ನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಾವೇ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಬಡಿಸಿ, ಶಾಲಾ ಮಕ್ಕಳೊಂದಿಗೆ ಸಂವಾದ ಮಾಡಿದರು.

ಅಕ್ಷಯ ಪಾತ್ರ ಸಂಸ್ಥಾನದ “೩ ಶತಕೋಟಿಯ ಊಟ”ದ ಪ್ರಯುಕ್ತ ಫಲಕವೊಂದನ್ನು ಮೋದಿಯವರು ಅನಾವರಣಗೊಳಿಸಿದರು.

ಕೇಂದ್ರ ಸರ್ಕಾರವು ಕಳೆದ ನಾಲ್ಕೂವರ ವರ್ಷಗಳಲ್ಲಿ ಮಕ್ಕಳಿಗೆ, ಅವರಲ್ಲೂ ವಿಶಿಷ್ಟವಾಗಿ ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ, ಚುಚ್ಚುಮದ್ದು ಮತ್ತು ವೈದ್ಯಕೀಯ ಯೋಜನೆಗಳು ಸೇರಿದಂತೆ, ಹಲವು ಯೋಜನೆಗಳನ್ನು ರೂಪಿಸಿದೆ. ಇದರಿಂದ ಮಕ್ಕಳು ಆರೋಗ್ಯವಂತರಾಗುವುದು ಮಾತ್ರವಲ್ಲ, ತಮ್ಮ ಶಿಕ್ಷಣವನ್ನು ಅರ್ಧಕ್ಕೆ ತೊರೆಯುವುದನ್ನೂ ತಪ್ಪಿಸಲು ನೆರವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು.

ಕಡಿಮೆ ಸೌಲಭ್ಯಗಳುಳ್ಳ ರಾಷ್ಟ್ರಗಳು ಮಕ್ಕಳ ಕಲ್ಯಾಣದಲ್ಲಿ ನಮ್ಮ ದೇಶಕ್ಕಿಂತಲೂ ಮುಂದಿವೆ ಎಂದು ಪ್ರಧಾನಿ ಮೋದಿ ತಿಳಿಸಿದರು. ೨೦೧೪ರಿಂದಲೂ ನಾವು ಚುಚ್ಚುಮದ್ದು, ಸ್ಚಚ್ಛತೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವತ್ತ ಗಮನ ಹರಿಸಿ ಸಮರೋಪಾದಿಯಾಗಿ ಮುನ್ಡಡೆದಿದ್ದೇವೆ. ಇಂದ್ರಧನುಷ್ ಚುಚ್ಚುಮದ್ದು ಅಭಿಯಾನದಡಿ, ೩ ಕೋಟಿ ೪೦ ಲಕ್ಷ ಮಕ್ಕಳು ಹಾಗೂ ೯೦ ಲಕ್ಷ ತಾಯಂದಿರಿಗೆ ಚುಚ್ಚುಮದ್ದು ನೀಡಲಾಗಿದೆ ಎಂದು ಪ್ರಧಾನಿ ಮೋದಿ ಮಾಹಿತಿ ನೀಡಿದರು.

ಶಾಲೆಗಳಲ್ಲಿ ಮಧ್ಯಾಹ್ದ ಊಟ ಬಡಿಸುವ ಪರಿಕಲ್ಪನೆ ಹಳೆಯದಾಗಿತ್ತು. ಮಕ್ಕಳಿಗೆ ಸಾಕಷ್ಟು ಶುದ್ಧ ಹಾಗೂ ಪೌಷ್ಟಿಕ ಆಹಾರ ಸಿಗುವಂತೆ ನಮ್ಮ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.

ಈ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಥುರಾ ಸಂಸದೆ ಹೇಮಾ ಮಾಲಿನಿ, ಉತ್ತರ ಪ್ರದೇಶದ ಮಂತ್ರಿಗಳಾದ ಪಂಡಿತ್ ಶ್ರೀಕಾಂತ್ ಶರ್ಮಾ, ಲಕ್ಷ್ಮಿನಾರಾಯಣ ಚೌಧರಿ ಮತ್ತು ಅನುಪಮಾ ಜೈಸ್ವಾಲ್ ಸಹ ಭಾಗವಹಿಸಿದರು.

Click to comment

Leave a Reply

Your e-mail address will not be published. Required fields are marked *

four × 2 =

To Top
WhatsApp WhatsApp us