ಆಡಿಯೋ ಟೇಪ್ ವಿವಾದದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ “ಆಪರೇಷನ್ ಕಮಲ” ಕಾರ್ಯಾಚರಣೆಗೆ ತೆರೆ ಬಿದ್ದಿದೆ.
“ಆಪರೇಷನ್ ಕಮಲ ಮಾಡುವುದನ್ನು ನಿಲ್ಲಿಸಿ, ಮುಂಬರುವ ಲೋಕಸಭಾ ಚುನಾವಣೆಯತ್ತ ಗಮನ ಕೊಡಿ, ಪ್ರಧಾನಿ ನರೇಂದ್ರ ಮೋದಿಯವರ ಗೆಲುವಿಗಾಗಿ ಕಟ್ಟುನಿಟ್ಟಾಗಿ ಕೆಲಸ ಮಾಡಿ” ಎಂದು ಪಕ್ಷದ ಹೈ ಕಮ್ಯಾಂಡ್ ರಾಜ್ಯದ ಭಾಜಪ ನಾಯಕರಿಗೆ ಕಿವಿಮಾತು ಹೇಳಿದೆ.
ಇತ್ತೀಚಿನ ಕೆಲ ದಿನಗಳಲ್ಲಿ ಆಡಿಯೋ ಟೇಪ್ ವಿವಾದವು ಭಾರತೀಯ ಜನತಾ ಪಕ್ಷದ ಮುಖಂಡ ಬಿ ಎಸ್ ಯಡಿಯೂರಪ್ಪನವರ ಸುತ್ತಲೂ ಬಿಗಿಯಾಗಿ ಸುತ್ತಿಕೊಂಡಿದೆ. ಅದರಲ್ಲಿರುವ ಧ್ವನಿ ತಮ್ಮದೇ ಎಂದು ಅವರು ಒಪ್ಪಿಕೊಂಡಿದ್ದಾರೆ.
ಅಲ್ಲದೇ, ಆಡಿಯೋ ಟೇಪ್ ಸಂವಾದದಲ್ಲಿ ಮುತ್ಸದ್ದಿ ರಾಜಕಾರಣಿ, ವಿಧಾನ ಸಭಾ ಅಧ್ಯಕ್ಷ ರಮೇಶ್ ಕುಮಾರ್ ಅವರ ಹೆಸರೂ ಸಹ ಕೇಳಿಬಂದದ್ದರಿಂದ ಅವರೂ ಸಹ ಬೇಸರಗೊಂಡಿದ್ದಾರೆ.
ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ ಈ ಆಡಿಯೋ ಟೇಪ್ ಪ್ರಕರಣದ ವಿಚಾರಣೆ ಆಗಬೇಕು ಎಂದು ಭಾರತೀಯ ಜನತಾ ಪಕ್ಷವು ಪಟ್ಟು ಹಿಡಿದರೆ, ಸಮ್ಮಿಶ್ರ ಸರ್ಕಾರದವರು ಇದಕ್ಕೆ ವಿಶೇಷ ತನಿಖಾ ತಂಡ ರಚಿಸಿ ವಿಚಾರಣೆ ಮಾಡಿಸಬೇಕು ಎಂದು ಸಭಾ ಅಧ್ಯಕ್ಷರಿಗೆ ಸಲಹೆ ನೀಡಿದೆ.
