ಬಿದ್ರಿ ಕಲಾಕೃತಿಗಳು ನಮ್ಮ ಕರ್ನಾಟಕ ರಾಜ್ಯದ ಬೀದರ ಜಿಲ್ಲೆಯಿಂದ ಬಂದಿರುವವು. ಬಿದ್ರಿ ಕಲೆ ೧೪ನೆಯ ಶತಮಾನದಲ್ಲಿ ಬಹ್ಮನಿ ಸುಲ್ತಾನರ ಆಳ್ವಿಕೆಯ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ರಚಿಸಲಾಯಿತು. ಬಿದ್ರಿಯು ವಿಶಿಷ್ಟ ಲೋಹದ ಕಲಾಕೃತಿ.
ಬ್ರಿಟನ್ ಮೂಲದ ಕೊಳ್ಳುವವರೊಬ್ಬರು ತಮ್ಮಲ್ಲಿರುವ ಬಿದ್ರಿ ಕಲಾಕೃತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳುವಂತೆ ಪ್ರೋತ್ಸಾಹಿಸಲು ಬ್ರಿಟನ್ ಸರ್ಕಾರವು, ೧೭ನೆಯ ಶತಮಾನ ಕಾಲಮಾನದ ಬಿದ್ರಿ ಹರಿವಾಣವೊಂದಕ್ಕೆ ರಫ್ತು ಪರವಾನಗಿಯ ಅರ್ಜಿಯ ಅನುಮೋದನೆಯನ್ನು ಮುಂದೂಡಿದೆ.

೧೭ನೆಯ ಶತಮಾನಕ್ಕೆ ಸೇರಿದ ಬಿದ್ರಿ ಹರಿವಾಣ
ಈ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರವು ಸುದ್ದಿಯೊಂದನ್ನು ಬಿಡುಗಡೆಗೊಳಿಸಿತು: “ವಿಶಿಷ್ಟವಾದ, ೧೭ನೆಯ ಶತಮಾನದ ದಕ್ಷಿಣ ಭಾರತೀಯ ಕಲಾಕೃತಿಯು ರಫ್ತಾಗುವ ಅಪಾಯದಲ್ಲಿದೆ.” ಈ ಹರಿವಾಣವು ಕಣ್ಣೀರ ಹನಿಯ ಆಕಾರದಲ್ಲಿದೆ.
ಬ್ರಿಟನ್‌ನ ಕಲೆ, ಪರಂಪರೆ ಮತ್ತು ಪ್ರವಾಸೋದ್ಯಮ ಮಂತ್ರಿ ಮೈಕೆಲ್ ಎಲ್ಲಿಸ್ ಈ ಬಿದ್ರಿ ಕಲಾಕೃತಿಯ ರಫ್ತನ್ನು ತಡೆದರು. ಬೀದರ ಜಿಲ್ಲೆಯ ಅಜ್ಞಾತ ಕಲಾವಿದನೊಬ್ಬ ರಚಿಸಿದ ಈ ಕಲಾಕೃತಿಯ ಬೆಲೆ ಬರೋಬ್ಬರಿ ೭೫,೦೦೦ ಬ್ರಿಟಿಷ್ ಪೌಂಡ್‌ಗಳು (೬೯,೫೪,೦೨೦.೩೧ ರೂಪಾಯಿಗಳು)
ಈ ಹರಿವಾಣವನ್ನು ಲಂಡನ್‌ನ ಪುರಾತನ ವಸ್ತು ಮಾರಾಟಗಾರರೊಬ್ಬರು ೧೯೭೪ರಲ್ಲಿ ಕೊಂಡುಕೊಂಡ್ರು, ಆನಂತರ ಬಷೀರ್ ಮೊಹಮದ್ ಎಂಬವರು ೧೯೭೪ರಿಂದ ೨೦೧೭ರ ತನಕ ಇದರ ಮಾಲೀಕತ್ವ ವಹಿಸಿದ್ದರು.
ಒಂದು ವೇಳೆ ಬ್ರಿಟನ್‌ನ ಯಾರೇ ವ್ಯಕ್ತಿ ಅಥವಾ ಯಾವುದೇ ಸಂಸ್ಥಾನವು ಈ ಬಿದ್ರಿ ಹರಿವಾಣವನ್ನು ಕೊಳ್ಳಲು ಮುಂದೆ ಬಂದಲ್ಲಿ, ರಫ್ತು ಪರವಾನಗಿಯ ಬಗೆಗಿನ ನಿರ್ಧಾರವನ್ನು ಏಪ್ರಿಲ್ ೧೭ರ ತನಕ ಮುಂದೂಡಿದ್ದೇವೆ ಎಂದು ಬ್ರಿಟನ್‌ನ ಡಜಿಟಲ್, ಸಾಂಸ್ಕೃತಿಕ, ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ತಿಳಿಸಿದೆ.
ಇಂದಿಗೂ ಸಹ ಬೀದರ ಜಿಲ್ಲೆ ಬಿದ್ರಿ ಕಲಾಕೃತಿಯ ಕೇಂದ್ರಬಿಂದುವಾಗಿದೆ. ಆದರೆ ಇಂತಹ ಕಲಾಕೃತಿಗಳು ಗುಜರಿ ಅಂಗಡಿಗಳಲ್ಲಿ ಬಿದ್ದಿರುವುದು ಬಹಳ ಬೇಸರದ ಸಂಗತಿ ಎಂದು ಕಲಾಕೃತಿ ಪ್ರೇಮಿಗಳು ಹೇಳುತ್ತಾರೆ. ಇವು ಗುಜರಿ ಅಂಗಡಿಗಳಲ್ಲಿ ೫೦೦ ರೂಪಾಯಿಗಳಿಗೋ ೧೦೦೦ ರೂಪಾಯಿಗಳಿಗೋ ಮಾರಾಟವಾಗುತ್ತಿವೆ. ಬಿದ್ರಿ ಕಲಾಕೃತಿಗಳ ಪರಂಪರೆಯ ಬಗ್ಗೆ ಗುಜರಿ ಅಂಗಡಿಯವರಿಗ ಬಹುಶಃ ಗೊತ್ತಿರಲಿಕ್ಕಿಲ್ಲ.
ಲಂಡನ್‌ನ ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಮ್‌ನಲ್ಲಿ ೯೨, ನ್ಯೂ ಯಾರ್ಕ್‌ನ ಮೆಟ್ರೊಪೊಲಿಟನ್ ಮ್ಯೂಸಿಯಮ್‌ನಲ್ಲಿ ೧೨, ಹೊಸ ದೆಹಲಿಯ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ೧೦೦-೧೨೫ ಬಿದ್ರಿ ಕಲಾಕೃತಿಗಳಿವೆ.
ಅಲ್ಲದೆ, ಹೈದರಾಬಾದಿನ ಸಾಲಾರ್ ಜಂಗ್ ಸಂಗ್ರಹಾಲಯ, ಕೋಲ್ಕಾತಾದ ಭಾರತೀಯ ಸಂಗ್ರಹಾಲಯ, ಮತ್ತು ಛತ್ರಪತಿ ಶಿವಾಜಿ ಮಹಾರಾಜ ವಸ್ತು ಸಂಗ್ರಹಾಲಯದಲ್ಲಿ ಬಿದ್ರಿ ಕಲಾಕೃತಿಗಳು ಲಭ್ಯವಿವೆ.
