ಹಿಂದೂ ಸಂಪ್ರದಾಯದಂತೆ ಮೂಗುತಿ ಧರಿಸಿದ್ದ ಹುಡುಗಿಯನ್ನು ವಿದ್ಯಾಸಂಸ್ಥೆಯೊಂದು ಆಚೆ ಕಳುಹಿಸಿದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಭಾರತೀಯ ಮೂಲದ ಆಸ್ಟ್ರೇಲಿಯಾದ ಹುಡುಗಿ ಸಾನ್ಯಾ ಸಿಂಘಾಲ್, ತಾನು ಹತ್ತನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದಾಗ, ಹಿಂದೂ ಸಂಪ್ರದಾಯದಂತೆ ಮೂಗುತಿ ಧರಿಸಿ ತರಗತಿಗೆ ಹಾಜರಾಗಿದ್ದರು. ಆಕೆ ಓದುತ್ತಿರುವ ಅರನ್ಮೋರ್ ಕ್ಯಾಥೊಲಿಕ್ ಕಾಲೇಜ್ ಆಡಳಿತದವರು ಮೂಗುತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಹತ್ತನೆಯ ತರಗತಿಯ ಮೊದಲನೆಯ ದಿನದಂದು ಸಾನ್ಯಾ ಸಮವಸ್ತ್ರ ನಿಯಮವನ್ನು ಉಲ್ಲಂಘಿಸಿದಕ್ಕೆ ಶಾಲಾ ಪ್ರಾಂಶುಪಾಲ ಡೆಕ್ಲಾನ್ ಟಾನ್ಯಾಮ್ ಆಕೆಗೆ ವಿದ್ಯಾಸಂಸ್ಥೆಯಿಂದ ಹೊರಹೋಗಲು ಆದೇಶಿಸಿದರು.
ಅರನ್ಮೋರ್ ಕ್ಯಾಥೋಲಿಕ್ ಕಾಲೇಜು ಆಸ್ಟ್ರೇಲಿಯಾ ದೇಶದ ಪಶ್ಚಿಮ ಆಸ್ಟ್ರೇಲಿಯಾದ ರಾಜಧಾನಿ ಪರ್ತ್‌ನಲ್ಲಿದೆ.
ಸಾನ್ಯಾ ತರಗತಿಯಿಂದ ಹೊರಗುಳಿದು ಒಂದು ವಾರ ಹಾಗೂ ಕೆಲ ದಿನಗಳು ಕಳೆದಿವೆ. ಇತ್ತ ವಿದ್ಯಾಸಂಸ್ಥೆಯೂ ಸಹ ತಮ್ಮ ಪಟ್ಟು ಬಿಡುತ್ತಿಲ್ಲ. ಹಲವು ಸ್ಥಳೀಯರು ವಿದ್ಯಾಸಂಸ್ಥೆಯ ಅಸಹಿಷ್ಣುತೆಯ ಧೋರಣೆಯನ್ನು ಟೀಕಿಸಿ, ಅಲ್ಲಿನ ಶಿಕ್ಷಣ ಇಲಾಖೆಯವರು ಕೂಡಲೆ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ.
“ಮೂಗುತಿ ಧರಿಸುವುದು ಆಧ್ಯಾತ್ಮಿಕ ಸಂಪ್ರದಾಯ. ಬಾಲಿಕೆಯರು ಮಹಿಳೆಯರಾಗುವ ಹಂತದಲ್ಲಿ ಅದನ್ನು ಧರಿಸುವುದು ರೂಢಿ. ಇದನ್ನು ಒಂದು ವರ್ಷದ ಕಾಲ ತೆಗೆಯಲಾಗುವುದಿಲ್ಲ. ಇದು ದೇವರಿಗೆ, ನಮ್ಮ ನಂಬಿಕೆಗಳಿಗೆ ಮತ್ತು ನಮ್ಮ ಸಂಸ್ಕೃತಿಗೆ ಸಲ್ಲಿಸುವ ಮರ್ಯಾದೆಯೇ ಹೊರತು ಫ್ಯಾಷನ್ ಅಲ್ಲ” ಎಂದು ಸಾನ್ಯಾರ ತಾಯಿ ಕಲ್ಯಾಣಿ ಸಿಂಘಾಲ್ ಹೇಳಿದ್ದಾರೆ.
ಸಾನ್ಯಾ ಸಿಂಘಾಲ್ (ಎಡ) ಮತ್ತು ಅವರ ತಾಯಿ ಕಲ್ಯಾಣಿ ಸಿಂಘಾಲ್ (ಬಲ)
“ನಾನು ಆಸ್ಟ್ರೇಲಿಯಾದವಳು. ನಾನು ಆಸ್ಟ್ರೇಲಿಯಾವನ್ನು ಪ್ರೀತಿಸುತ್ತೇನೆ. ಆದರೆ ನಮ್ಮ ಸಂಸ್ಕೃತಿಯನ್ನೂ ಸಹ ಪಾಲಿಸಲು ಅಷ್ಟೇ ಇಷ್ಟಪಡುತ್ತೇನೆ. ಇಸ್ಲಾಮಿಕ್ ಬಾಲಿಕೆಯರು ತಲೆಯ ಸುತ್ತಲೂ ವಸ್ತ್ರ ಧರಿಸುವುದಕ್ಕೆ ಅನುಮತಿ ನೀಡುತ್ತಾರೆ, ನನ್ನ ಮೂಗುತಿಯ ಬಗ್ಗೆ ಮಾತ್ರ ಏಕೆ ತಾರತಮ್ಯ? ಅವರ ಮುಂದೆ ಪ್ರಾಂಶುಪಾಲರು ನನ್ನನ್ನು ಹೊರಗೆ ಕಳುಹಿಸಿದ್ದು ತುಂಬ ಬೇಸರ ಮತ್ತು ಮುಜುಗರ ತಂದಿದೆ” ಎಂಬುದು ಸಾನ್ಯಾ ಸಿಂಘಾಲ್‌ರ ಅಳಲು.
ಕ್ಯಾಥೊಲಿಕ್ ಶಿಕ್ಷಣ ವೃಂದದವರು ಹಿಂದೂ ಸಂಸ್ಕತಿ-ಸಂಪ್ರದಾಯಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಆಸ್ಟ್ರೇಲಿಯಾ ಹಿಂದೂ ಪರಿಷತ್ (Hindu Council of Australia) ಹೇಳಿದೆ.
ಚಿತ್ರ ಕೃಪೆ: Pics courtesy: News.com.au / Today Tonight / Source:Supplied
