ಸಾಮಾಜಿಕ, ಧಾರ್ಮಿಕ ಹಾಗೂ ಕಲಾಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ದ್ವೀಪ ದೇಶ ಬಹರೇನ್ ನ “ಅಮ್ಮ ಕಲಾವಿದರು” ವತಿಯಿಂದ ಶ್ರೀ ಶನೈಶ್ಚರ ಪೂಜೆ , ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿಶೇಷ ಭಜನಾ ಮಹೋತ್ಸವವು ವಿಜೃಂಬಣೆಯಿಂದ ನೆರವೇರಿತು. ಮನಾಮ ನಗರದ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾದರು.
ತಾಯ್ನಾಡಿನಿಂದ ಆಗಮಿಸಿದ ಪುರೋಹಿತರಾದ ಶ್ರೀ ಹರ್ಷ ಭಟ್ ಪೆರುವಾಯಿ ಅವರು ಕಥಾ ಶ್ರವಣ, ಧಾರ್ಮಿಕ ಪ್ರವಚನ, ಪೂಜಾ ವಿಧಿವಿಧಾನಗಳನ್ನು ವಿದ್ಯುಕ್ತವಾಗಿ ನೆರವೇರಿಸಿ ಭಕ್ತಾದಿಗಳನ್ನು ಹರಸಿದರು.
ವಿಶೇಷವಾಗಿ ಮಕ್ಕಳ ತಂಡ, ಮಹಿಳೆಯರ ಹಾಗೂ ಪುರುಷರ ತಂಡಗಳಿಂದ ಕುಣಿತ ಭಜನೆಯ ಮೂಲಕ ಸಂಕೀರ್ತನ ಕಾರ್ಯಕ್ರಮ ಅಚ್ಚುಕಟ್ಟಾಗಿ ಪ್ರಸ್ತುತಿಗೊಂಡಿತು. ಶ್ರೀಮತಿ ಹರಿಣಿ ಉತ್ಕರ್ಷ್ ಶೆಟ್ಟಿ, ನಮಿತ ಸಾಲ್ಯಾನ್, ಯಕ್ಷಿತ್ ಶೆಟ್ಟಿ, ದಿವ್ಯರಾಜ್ ರೈ, ಸಂದೀಪ್ ಮೆಂಡನ್, ಸುಧೀರ್ ಶೆಟ್ಟಿ ಯವರು ಭಜನಾ ತರಬೇತಿ ನೀಡಿ ಸಹಕರಿಸಿದ್ದರು.
ಮಂಗಳಾರತಿ, ಪ್ರಸಾದ ವಿತರಣೆಯ ಬಳಿಕ ವಿಶೇಷ ಅನ್ನಪ್ರಸಾದ ಭೋಜನ ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಪುರೋಹಿತ ಶ್ರೀ ಹರ್ಷ ಭಟ್ ರನ್ನು “ಅಮ್ಮ ಕಲಾವಿದರು ಬಹರೇನ್” ಪರವಾಗಿ ಮುಖ್ಯನಿರ್ವಾಹಕ ಶ್ರೀ ಮೋಹನದಾಸ್ ರೈ ಎರುಂಬು, ನಿರ್ವಾಹಕರಾದ ಶ್ರೀ ದೂಮಣ್ಣ ರೈ, ಸಂತೋಷ್ ನಾಯಕ್, ಲಕ್ಷ್ಮೀಶ್ ಕುಂಬ್ಳೆ, ಸುನಿಲ್ ಪೂಜಾರಿ, ಯಕ್ಷಿತ್ ಶೆಟ್ಟಿ, ಸಂದೀಪ್ ಮೆಂಡನ್, ದಿವ್ಯರಾಜ್ ರೈ, ರಾಮ್ ಪ್ರಸಾದ್ ಮುಂತಾಗಿ ಎಲ್ಲಾ ಸದಸ್ಯರೊಡಗೂಡಿ ಶಾಲು, ಸ್ಮರಣಿಕೆ ನೀಡುವ ಮೂಲಕ ಗೌರವಿಸಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಭಕ್ತಾದಿಗಳು, ನಿರ್ವಾಹಕರು, ಸ್ವಯಂಸೇವಕರು, ಸೇವಾಕರ್ತರು, ಭಜನಾ ತಂಡದ ಸದಸ್ಯರು ಹಾಗೂ ಎಲ್ಲಾ ಪ್ರಾಯೋಜಕರಿಗೆ ಮುಖ್ಯನಿರ್ವಾಹಕ ಶ್ರೀ ಮೋಹನದಾಸ್ ರೈ ಎರುಂಬು ಕೃತಜ್ಞತೆ ಸಲ್ಲಿಸಿದರು.
ಸಿಸೆಲ್ ಪನಯಿಲ್ ಸೊಮನ್
ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಇಂಡ್‌ಸಮಾಚಾರ್, ಬಹರೇನ್
