“ವಿವಿಧ ತಲೆಮಾರಿನವರು ಒಂದು ಉದ್ದಿಮೆಯಲ್ಲಿ ಉದ್ಯೋಗಿಗಳಾಗಿರುವಾಗ ಅವರವರ ಅದ್ಯತೆಗಳು ಬೇರೆ ಬೇರೆ ತರಹ ಇರುತ್ತವೆ. ಒಬ್ಬರಿಗೆ ಪುಸ್ತಕ ಕೊಳ್ಳಲು ಉಡುಗೊರೆಯ ಕೂಪನ್ ದೊರೆತಾಗ ಸಂತಸಪಟ್ಟರೆ, ಇನ್ನೊಬ್ಬರಿಗೆ ಚಲನಚಿತ್ರ ವೀಕ್ಷಿಸುವ ಟಿಕಟ್ ಕೂಪನ್ ಸಿಕ್ಕಲ್ಲಿ ಸಂತಸ ಪಡುತ್ತಾರೆ, ಮತ್ತೊಬ್ಬರು ಉಪಾಹಾರ ಮಂದಿರ ಅಥವಾ ಮಧುಶಾಲೆಯ ಕೂಪನ್ ಸಿಕ್ಕಾಗ ಖುಷಿ ಪಡುತ್ತಾರೆ. ನೀವು ನಿಮ್ಮ ಉದ್ಯೋಗಿಗೆ ಎಷ್ಟು (ವೇತನ) ನೀಡುತ್ತೀರಿ ಎನ್ನುವುದು ಲೆಕ್ಕಕ್ಕೆ ಬರುವಂತೆಯೇ, ಆ ಉದ್ಯೋಗಿಗೆ ಅದರ ಬಗ್ಗೆ ಹೇಗನಿಸುತ್ತದೆ ಎಂಬುದೂ ಸಹ ಲೆಕ್ಕಕ್ಕೆ ಬರುತ್ತದೆ. ವಯಸ್ಸು, ಲಿಂಗ ಮತ್ತು ತಲೆಮಾರಿನ ಆಧಾರದ ಮೇಲೆ ಸಂತಸದ ಸ್ಥಿತಿ ವಿಭಿನ್ನ ವ್ಯಕ್ತಿಗಳಲ್ಲಿ ವಿಭಿನ್ನವಾಗಿರುತ್ತದೆ” ಎಂದು ಐಐಎಂ ಲಕ್ನೋ ನೊಯಿಡಾ ವಿಭಾಗದ ಅಂದಿನ ಸಂಸ್ಥಾಪಕ ಡೀನ್ ಡಾ. ಜಿತೇಂದ್ರ ದಾಸ್ ಅಭಿಪ್ರಾಯ ಪಟ್ಟರು.
ಡಾ. ಜಿತೇಂದ್ರ ದಾಸ್ ಈಗ ಹೊಸ ದೆಹಲಿಯ ಫೋರ್ ವ್ಯವಸ್ಥಾಪನಾ ವಿದ್ಯಾಲಯದ (FORE School of Management) ನಿರ್ದೇಶಕರಾಗಿದ್ದಾರೆ.
ಅವರು ಮಾನವ ಸಂಪನ್ಮೂಲ ಶೃಂಗಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ನಡೆದ ಈ ಶೃಂಗಸಭೆಯಲ್ಲಿ ವಿವಿಧ ತಲೆಮಾರಿನ ಉದ್ಯೋಗಿಗಳು ಮತ್ತು ಅವರ ಆದ್ಯತೆಗಳು, ಮನೋಭಾವಗಳು ಮತ್ತು ಹಲವು ಸಂಬಂಧಿತ ವಿಚಾರಗಳನ್ನು ಚರ್ಚಿಸಲಾಯಿತು. ಕೆಳಗಿನ ಅಂಶಗಳು ಪ್ರಮುಖ ಚರ್ಚಾವಸ್ತುವಾದವು:
- ತಲೆಮಾರು-ಸ್ನೇಹಿ ಸಿ ಅಂಡ್ ಆರ್ (C & R) ರೂಪರೇಖೆಗಳ ರಚನೆ
- ಉದ್ಯೋಗಿಗಳಿಗೆ ನೀಡಲಾಗುವ ‘ಬಹುಮಾನ’ಗಳನ್ನು ಸಾಮಾನ್ಯೀಕರಣಗೊಳಿಸದೆ, ಆ ಉದ್ಯೋಗಿಯ ತಲೆಮಾರು, ಆದ್ಯತೆ, ಲಿಂಗವನ್ನು ಆಧರಿಸಿ, ಅದಕ್ಕೆ ತಕ್ಕಂತೆ ನೀಡುವುದು
- ಉದ್ದಿಮೆದಾರ ಮತ್ತು ಉದ್ಯೋಗಿಯ ದೃಷ್ಟಿಕೋನದಲ್ಲಿನ ವ್ಯತ್ಯಾಸಗಳನ್ನು ಗಮನಿಸಿ ಅದರಂತೆ ನೀತಿಗಳನ್ನು ರಚಿಸುವುದು
ಅಲ್ಲದೇ, ವೇತನದ ಮೇಲೆ ಪ್ರಭಾವ ಬೀರುವ ಕಾರಣಗಳು, ಸರ್ಕಾರಿ ನಿಬಂಧನೆಗಳು, ಸಾಮಾಜಿಕ ಭದ್ರತೆ, ಸಾಮಾಜಿಕ ಬದಲಾವಣೆ ಮತ್ತು ಜನವಿವರಣೆ ವಿಷಯಗಳನ್ನೂ ಸಹ ಚರ್ಚಿಸಲಾಯಿತು. ಆಯಾ ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣತರಾದ ಭಾಷಣಕಾರರು ಚರ್ಚಿಸಿದರು.
ಚಿತ್ರ ಕೃಪೆ: FORE School of Management, Delhi
