ಭಾರತದ ಸರ್ವೋಚ್ಚ ಅರಣ್ಯ ಮಂಡಳಿಯಾದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ತನ್ನ ಮುಂದೆ ಬಂದ ೬೮೭ ಯೋಜನೆ ಪ್ರಸ್ತಾಪಗಳಲ್ಲಿ ೬೮೨ ಪ್ರಸ್ತಾಪಗಳಿಗೆ ಹಸಿರು ನಿಶಾನೆ ತೋರಿಸಿರುವುದು ವರದಿಯಾಗಿದೆ.
ಅರಣ್ಯ ವಲಯದ ಭೂಮಿಯನ್ನು ಕೈಗಾರಿಕೆ ಮತ್ತು ಅಭಿವೃದ್ಧಿಗಾಗಿ ಪರಿವರ್ತಿಸುವ ಬಗ್ಗೆ ಈ ಮಂಡಳಿಯು ಪರಿಶೀಲನೆ ಮಾಡಿ ನಿರ್ಧರಿಸುತ್ತದೆ. ೨೦೧೪ರಿಂದ ಇಲ್ಲಿಯ ವರಗೆ ಈ ಮಂಡಳಿಯು ಕೇವಲ ಐದು ಯೋಜನೆಗಳನ್ನು ಮಾತ್ರ ತಿರಸ್ಕರಿಸಿದೆ ಎಂದು ಲೋಕ ಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ದೊರೆತ ಮಾಹಿತಿಯಿದು.
“ಪರಿಸರ ಮಂತ್ರಾಲಯವು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಎಲ್ಲಾ ಅಧಿಕಾರಗಳನ್ನೂ ‘ಹೇಳಿದಂತೆ ಕೇಳುವ ಸ್ಥಾಯಿ ಸಮಿತಿ’ಗೆ ವರ್ಗಾಯಿಸಿದೆ. ಇದು ಆಗಾಗ್ಗೆ ಸಭೆ ಸೇರಿ ಯೋಜನೆಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಅವನ್ನು ಅನುಮೋದಿಸುತ್ತದೆ” ಎಂದು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯ ಪ್ರವೀಣ್ ಭಾರ್ಗವ್ ಹೇಳಿದರು.
೨೦೧೪ರ ಜುಲೈ ತಿಂಗಳಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯಲ್ಲಿ ಕೇವಲ ಇಬ್ಬರು ಸಂರಕ್ಷಣವಾದಿಗಳು ಮತ್ತು ಒಬ್ಬ ಸರ್ಕಾರೇತರ ಸಂಘಟನೆಯ (ಎನ್‌ಜಿಒ) ವ್ಯಕ್ತಿಯಿದ್ದರು. ಇದು ೧೯೭೨ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಸ್ಪಷ್ಟ ಉಲ್ಲಂಘನೆ. ಕಾಯಿದೆಯ ಪ್ರಕಾರ ೧೦ ಪ್ರಮುಖ ಪರಿಸರವಾದಿಗಳು ಮತ್ತು ಐದು ಎನ್‌ಜಿಒಗಳಿರಬೇಕು.
೨೦೧೪ರ ಆಗಸ್ಟ್‌ನಲ್ಲಿ ರಾಷ್ಟ್ರೀಯ ವನ್ಯಜೀವಿ ಮಂಡಳಿಯು, ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ ಪ್ರಸ್ತಾಪಿತ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿತು.
ಪರಿಸರವಾದಿಗಳು ಮತ್ತು ವನ್ಯಜೀವಿ ಪ್ರೇಮಿಗಳೆಲ್ಲರೂ ತೀವ್ರ ಆಕ್ರೋಶ ವ್ಯಕ್ತಡಿಸಿದರು. ಇದರ ಫಲವಾಗಿ ಸರ್ವೋಚ್ಚ ನ್ಯಾಯಾಲಯವು, ರಾಷ್ಟ್ರೀಯ ವನ್ಯಜೀವಿಮಂಡಳಿಯು ಅನುಮೋದಿಸಿದ ಎಲ್ಲಾ ಯೋಜನಾ ಪ್ರಸ್ತಾಪಗಳಿಗೆ ತಡೆಯಾಜ್ಞೆ ವಿಧಿಸಿತು. ಮಂಡಳಿಯ ಪುನರ್ರಚನೆಯಾಯಿತು.
ಚಿತ್ರ ಕೃಪೆ: https://economictimes.indiatimes.com
