ಬೆಂಗಳೂರಿನ ಯಲಹಂಕದಲ್ಲಿ ಏರೋ ಇಂಡಿಯಾ ೨೦೧೯ ಪ್ರದರ್ಶನ ನಡೆಯುತ್ತಿರುವಾಗ, ತೆರೆದ ವಾಹನ ನಿಲುಗಡೆ ಸ್ಥಳದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ ಪರಿಣಾಮವಾಗಿ ಸುಮಾರು ೩೦೦ ಕಾರುಗಳು ಸುಟ್ಟು ಭಸ್ಮವಾಗಿರುವುದು ವರದಿಯಾಗಿದೆ.
ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ.
ಯಾವುದೇ ಗಾಯಗಳು ಸಂಭವಿಸಿದ್ದು ವರದಿಯಾಗಿಲ್ಲ.
“ಒಟ್ಟು ೩೦೦ ಕಾರುಗಳು ಸುಟ್ಟುಹೋಗಿವೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಪ್ರಮುಖ ಅಗ್ನಿ ಶಾಮಕ ಅಧಿಕಾರಿ (ಪಶ್ಚಿಮ) ನೇತೃತ್ವದಲ್ಲಿ ೧೦ ಅಗ್ನಿಶಾಮಕ ದಳಗಳು ಮತ್ತು ೫ ಇತರೆ ಅಗ್ನಿ ಶಾಮಕದಳದವರು ಬೆಂಕಿಯನ್ನು ನಂದಿಸಿದರು” ಎಂದು ಅಗ್ನಿ ಶಾಮಕ ಮತ್ತು ತುರ್ತು ಸೇವೆ ಡಿಐಜಿ ಎಂ ಎನ್ ರೆಡ್ಡಿ ಅವರು ಟ್ವೀಟ್ ಮಾಡಿದರು.
ಅಕ್ಕ-ಪಕ್ಕದ ಕಾರುಗಳನ್ನು ದೂರ ಸರಿಸಿ ಖಾಲಿ ಜಾಗ ಮಾಡುವ ಮೂಲಕ ಬೆಂಕಿಯ ಹರಡುವಿಕೆಯನ್ನು ತಡೆಗಟ್ಟಲಾಯಿತು ಎಂದು ರೆಡ್ಡಿ ಅವರು ಹೇಳಿದರು.
ಒಣ ಹುಲ್ಲು ಮತ್ತು ಜೋರಾಗಿ ಬೀಸಿದ ಗಾಳಿ ಈ ಬೆಂಕಿ ಆಕಸ್ಮಿಕಕ್ಕೆ ಕಾರಣ ಎನ್ನಲಾಗಿದೆ.
ಅಗ್ನಿ ಶಾಮಕ ದಳದವರು ಇನ್ನೂ ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.
