ಎಲ್ಲ ಪರಿಸರಾತ್ಮಜರಿಗೆ ನಮಸ್ಕಾರಗಳು.
ಈ ೨೦೧೯ ಯಾಕೋ ಅರಣ್ಯ ಅರಣ್ಯವಾಸಿ ಜೀವಿಗಳಿಗೆ ಅಭದ್ರತೆ ಅನಾಹುತ ಮತ್ತು ಆತಂಕದ ವರ್ಷವಾಗಿದೆ ಎನಿಸುತ್ತಿದೆ.
ಕಳೆದ ವರ್ಷ ಸುಮಾರು ಆರುನೂರು ಕೋಟಿ ಹಣವನ್ನು ಅರಣ್ಯ ಇಲಾಖೆ ಉಳಿಸಿ ಗಳಿಸಿ ಸರ್ಕಾರಕ್ಕೆ ಮರಳಿಸಿದೆ. ಈ ಹಣದಲ್ಲಿಯೇ ಈ ಅಗ್ನಿ ಅನಾಹುತಗಳಿಗೂ, ಮತ್ತು ಹೊಸ ಅರಣ್ಯ ಸೃಷ್ಟಿಸಲೂ ಬಳಸಲು ಕ್ರಿಯಾಯೋಜನೆ ರೂಪಿಸಬಹುದಿತ್ತಲ್ಲವೇ?
ನಮ್ಮಂಥ ಶ್ರೀ ಸಾಮಾನ್ಯರಿಗೆ ಅನಿಸುವ ಅಭಿಪ್ರಾಯ ಅರಣ್ಯ ಇಲಾಖೆಯ ವರಿಗೇಕೆ ಬರುವುದಿಲ್ಲ?
ಅಭಯಾರಣ್ಯದಲ್ಲಿ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನ ಪಟ್ಟಿದ್ದಾರೆ. ಅರಣ್ಯ ಇಲಾಖೆ ಈ ತರಹದ ಅವಘಡಗಳಾಗದಂತೆ ಪೂರ್ವಾಭಾವಿಯಾಗಿ ಯಾವ ಜಾಗೃತೆಯೂ ತೆಗೆದುಕೊಂಡಿಲ್ಲದಿರುವುದು ತೀರಾ ಅಚ್ಚರಿಯಾಗುತ್ತದೆ.
ಇತ್ತೀಚೆಗೆ ನಮ್ಮ ಭಾಗದಲ್ಲಿ ನೆಡೆದ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಮ್ಮ ಶಾಸಕರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಸರ್ವೋಚ್ಚ ನ್ಯಾಯಾಲಯದ ಅರಣ್ಯ ಒತ್ತವರಿದಾರರ ಒಕ್ಕಲೆಬ್ಬಿಸುವ ತೀರ್ಪಿನ ವಿರುದ್ಧವಾಗಿ “ರಕ್ತ ಕ್ರಾಂತಿ” ಮಾಡಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದರು. ಸರಿ – ಅಸಾಹಯಕ ರೈತ ಅರಣ್ಯ ಒತ್ತುವರಿ ಮನೆ ಕೃಷಿ ಮಾಡಿದ್ದಾನೆ. ಆದರೆ ಆ ನಿರಾಶ್ರಿತರಿಗೆ ಸರ್ಕಾರ ಕಂದಾಯ ಭೂಮಿ ನೀಡಿ ಅರಣ್ಯದಿಂದ ತೆರೆವು ಮಾಡಬೇಕು. ನಮ್ಮ ಸರ್ಕಾರಗಳು ಕೊಟ್ಟ ದಾಖಲೆಗಳ ಮೇಲೆಯೇ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿರುವುದು. ಈಗ ಅದರ ತೀರ್ಪೇ ಸರಿಯಲ್ಲ ಎಂದು ಧೂಷಿಸುತ್ತಿರುವುದು ತಪ್ಪು. ಎಲ್ಲಾ ಜನರಿಗೂ ವಸತಿ ದುಡಿಯಲು ಭೂಮಿ ಉದ್ಯೋಗ ವ್ಯವಸ್ಥೆ ಮಾಡಿ ರಕ್ಷಿಸಿ ಕಾಪಾಡಲೆಂದೇ ನಾವು “ಸರ್ಕಾರ” ಎಂಬ ವ್ಯವಸ್ಥೆ ಮಾಡಿರುವುದು. ನಮ್ಮ ರಾಜಕಾರಣಿಗಳು ಲಗಾಯ್ತಿನಿಂದ ಮಾಡಿಕೊಂಡು ಬಂದ ದೂರ್ತತನವಿದು.
ಜನಸಾಮಾನ್ಯರಿಗೆ ಕಾಡು ಕಡಿದು ಅಕ್ರಮ ಮಾಡು, ಸರ್ಕಾರದ ಭೂಮಿ ಒತ್ತುವರಿ ಮಾಡು ಎಂದು ಚಿತಾವಣೆ ಮಾಡುವ ಸುಲಭ ಮಾರ್ಗವನ್ನು ನಮ್ಮ ರಾಜಕಾರಣಿಗಳು ಮಾಡಿಕೊಂಡು ಬಂದ ದುಷ್ಪರಿಣಾಮ ಇದು. ಸರ್ಕಾರದ ಆಸ್ತಿ ಹೋದರೆ ಹೋಗಲಿ ನನ್ನ ಗಂಟು ಹೋಗುವುದೇನು? ತಾನು ಮಾತ್ರ ಕೋಟಿ ಗಟ್ಟಲೆ ಹಣಗಳಿಸಿ ಆಯಕಟ್ಟಿನ ಜಾಗದಲ್ಲಿ ಆಸ್ತಿ ಮಾಡಿ ಅರಾಮವಾಗಿದ್ದು ಜನಸಾಮಾನ್ಯರನ್ನು ಕಾಡಿಗಟ್ಟಿದ್ದಾರೆ. ಇದಕ್ಕೆ ನಮ್ಮ ರಾಜಕಾರಣಿಗಳೇ ಕಾರಣ ಮತ್ತು ಹೊಣೆ.
ಅರಣ್ಯ ಒತ್ತುವರಿದಾರರನ್ನು ಅತಂತ್ರ ಮಾಡದೆ ಸರ್ಕಾರ ಕಂದಾಯ ಖಾಸಗಿ ಭೂಮಿ ಕೊಂಡು ಅವರಿಗೆ ಮರುವಸತಿ ಮಾಡಿ ರಕ್ಷಿಸಬೇಕು. ಜನಸಾಮಾನ್ಯರು ರಾಜಕಾರಣಿಗಳ ಈ ಮುಖವಾಡವನ್ನು ಅರ್ಥ ಮಾಡಿಕೊಳ್ಳಬೇಕು.
ನಮ್ಮ ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಎನ್ ಆರ್ ಪುರ ಮಾರ್ಗದ ರೈಲು ಪಥ ನಿರ್ಮಾಣವಾಗಲಿ ಎಂದ ಸರ್ಕಾರ ಮತ್ತು ಸಂಭಂದಪಟ್ಟ ಇಲಾಖೆಯನ್ನು ಒತ್ತಾಯ ಮಾಡಿದ್ದೇನೆ ಎಂದರು. ಇದು ಖಂಡಿತವಾಗಿ ಸಲ್ಲ.
ರೈಲಿನಲ್ಲಿ ಶಿವಮೊಗ್ಗ ದಿಂದ ಶೃಂಗೇರಿಗೆ ಯಾರು ಓಡಾಡಲು ಬಯಸುತ್ತಾರೆ? ಇವತ್ತು ಸಾರ್ವಜನಿಕ ಸಾರಿಗೆ ಬಸ್ಸಿನಲ್ಲಿ ಅರವತ್ತು ವರ್ಷಗಳ ಮೇಲ್ಪಟ್ಟವರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಮಾತ್ರವೇ ಸಂಚರಿಸುತ್ತಾರೆ. ಬಸ್ ಖಾಲಿ ಖಾಲಿ. ನಮ್ಮ ಮಲೆನಾಡಿನ ಭೌಗೋಳಿಕ ಪರಿಸರಕ್ಕೆ ಉತ್ತಮ ರಸ್ತೆ ಮಾರ್ಗ ಸಾಕು.
ರೈಲು ಮಾರ್ಗ ನಮಗೆ ಖಂಡಿತವಾಗಿ ಬೇಡ. ಇದನ್ನು ಅಭಿವೃದ್ಧಿ ಅಂತ ಅನ್ನುವ ವ್ಯವಸ್ಥೆ ವಿರುದ್ಧವಾಗಿ ನಾವು ಹೋರಾಡುವುದೆಂತು? ಅರ್ಥವಾಗ್ತಿಲ್ಲ,
ಮತ್ತಷ್ಟು ಮರ ಕಡಿ…. ನೈಸರ್ಗಿಕ ಕಂದಕಗಳನ್ನು ಪ್ರಕೃತಿ ನಿರ್ಮಿತ ಗುಡ್ಡ ಬೆಟ್ಟ ಅಗೆದು ಮಣ್ಣು ಕೆರೆದು ತಂದು ತುಂಬು…. ಇದೇ ಆಗಿದೆ.
ನಾವುಗಳು ಎಂದಿನಂತೆ ಅಸಾಹಯಕರಾಗಿದ್ದೇವೆ.
ವಂದನೆಗಳು,
ಪ್ರಬಂಧ ಅಂಬುತೀರ್ಥ
(ಅತಿಥಿ ಲೇಖಕರು)
