ಸಿಕ್ಕಿಮ್‌ನಲ್ಲಿ ಹಿಮಪಾತದಲ್ಲಿ ಸಿಕ್ಕಿಹಾಕಿಕೊಂಡ ಪ್ರವಾಸಿಗರನ್ನು ರಕ್ಷಿಸಿದ ಭಾರತೀಯ ಭೂ ಸೇನೆ
೨೦೧೮ರ ಡಿಸೆಂಬರ್ ೨೮ರಂದು ಸಿಕ್ಕಿಮ್ ಮತ್ತು ಡಾರ್ಜೀಲಿಂನ್‌ನ ಎತ್ತರದ ಸ್ಥಳಗಳಲ್ಲಿ ಭಾರೀ ಹಿಮಪಾತವಾಯಿತು. ಇದರ ಪರಿಣಾಮವಾಗಿ ಸುಮಾರು ೨,೮೦೦ ಪ್ರವಾಸಿಗರು ಅಲ್ಲಿ ಸಿಲುಕಿದ್ದರು. ಆ ವಲಯಗಳು ಮತ್ತು ದೇಶದ ಇತರೆ ಭಾಗಗಳ ನಡುವಣ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಮರಗಟ್ಟುವ ತೀವ್ರ ಚಳಿಯಲ್ಲಿ ಸಿಲುಕಿಕೊಂಡ ಪ್ರವಾಸಿಗರಿಗೆ ಎಲ್ಲಾ ದಾರಿಗಳು ಮುಚ್ಚಿದಂತಾದವು. ಅತೀವ ಕಂಗೆಟ್ಟಿದ್ದ ಪ್ರವಾಸಿಗರ ಪಾಲಿಗೆ ಭಾರತೀಯ ಭೂಸೇನೆ ಆಪದ್ಬಾಂಧವವಾಯಿತು. ಸಿಕ್ಕಿಮ್ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರವಾಸಿಗ ರೆಲ್ಲರನ್ನೂ ಸೈನಿಕರು ರಕ್ಷಿಸಿದರು.
ಹಿರಿಯರು ಮತ್ತು ಮಕ್ಕಳು ಸೇರಿದಂತೆ ಎಲ್ಲ ಪ್ರವಾಸಿಗಳಿಗೂ ಸೇನಾ ತಂಗುದಾಣದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಯಿತು. ಈ ಪ್ರವಾಸಿಗರಲ್ಲಿ ೯೦ ಜನರು ಅಸ್ವಸ್ಥರಾದರು. ಇವರೆಲ್ಲರನ್ನೂ ಆಂಬ್ಯೂಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹಿಮಪಾತದಿಂದ ರಕ್ಷಿತರಾದ ಪೈಕಿ ನಮ್ಮ ವಾಚಕ ಆರ್ಯನ್ ಅಹಮದ್ ಸಹ ಒಬ್ಬರು. ಇವರನ್ನು ಚಂಗೂ ಕೆರೆಯಿಂದ ರಕ್ಷಿಸಲಾಯಿತು. ಅವರು ಒಂದು ಲಘು ಪತ್ರ ಬರೆದಿದ್ದಾರೆ:
“ಭಾರತೀಯ ಭೂ ಸೇನೆಯು ಚಂಗೂ/ಸೊಂಗ್ಮೊ ಕೆರೆಯಿಂದ ೨,೮೦೦ ಜನರನ್ನು ರಕ್ಷಿಸಿ, ೧೭ನೆಯ ಮೈಲ್ ಟಿಸಿಪಿ ಶಿಬಿರದಲ್ಲಿರಿಸಿದೆ. ಭೂ ಸೇನೆಯ ಚಿತ್ರಗಳನ್ನು ಹಂಚಲು ನನಗೆ ಹೆಮ್ಮೆಯುಂಟಾಗಿದೆ.
ನಾನೂ ಸಹ ಅಲ್ಲಿದ್ದೆ. ಇದ್ದಕ್ಕಿದ್ದಂತೆ ಹಿಮಪಾತವಾಯಿತು. ಜನರೆಲ್ಲರೂ ತಾವು ಬದುಕುಳಿಯುವ ಆಸೆ ಬಿಟ್ಟಿದ್ದರು. ಸಂಜೆ ಸುಮಾರು ೬ ಘಂಟೆಗೆ ಸೇನೆಯು ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಇಡೀ ರಾತ್ರಿ ಮುಂದುವರೆಸಿತು. ಚಂಗೂ ಕೆರೆ ಹಾಗೂ ಇದರ ಹತ್ತಿರವಿದ್ದ ಮಬಾ ಮಂದಿರದಿಂದ ಎಲ್ಲಾ ಪ್ರವಾಸಿಗರನ್ನೂ ರಕ್ಷಿಸುವಲ್ಲಿ ಸಫಲವಾಯಿತು.
ನನಗೆ ಈಗ ಭಯವಿಲ್ಲ. ಸೇನೆಯವರು ನಮ್ಮೊಂದಿಗಿದ್ದಾರೆ ಎಂಬುದು ನನಗೆ ಗೊತ್ತು. ಅವರು ತಮ್ಮ ಹಾಸಿಗೆ ಮತ್ತು ಮಲಗುವ ಚೀಲಗಳನ್ನು ನಮಗೆ ಕೊಟ್ಟು ತಾವು ಹೊರಗಡೆ -೯ ಡಿಗ್ರಿ ಥಂಡಿಯಲ್ಲಿದ್ದರು. ಎಲ್ಲಾ ಪ್ರವಾಸಿಗರಿಗೂ ಸೈನಿಕರು ಮಾಡಿದ ಉಪಕಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಬಹಳ ಧನ್ಯನಾಗಿದ್ದೇನೆ. ಈ ದೇಶದಲ್ಲಿರುವವರೆಲ್ಲರಿಗೂ ಗೊತ್ತಾಗಲಿ ಎಂದು ಈ ಪತ್ರ ಬರೆದು ಹಂಚುವೆ.”
