ಅಮೆರಿಕಾ ತನ್ನ ಮೊಟ್ಟಮೊದಲ ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಯುಎಇ ವಿರುದ್ಧ ಆಡಲಿದೆ.
ಈ ಮಾಹಿತಿಯನ್ನು ಯುಎಸ್‌ಎಕ್ರಿಕೆಟ್ (USACricket) ಇಂದು ತಿಳಿಯಪಡಿಸಿತು. ಟಿ೨೦ ಪಂದ್ಯಕ್ಕಾಗಿ ೧೪ ಮಂದಿ ಸದಸ್ಯರ ತಂಡವನ್ನು ಸಿದ್ಧಗೊಳಿಸಿದೆ. ಟಿ೨೦ ಸರಣಿಯು ಮಾರ್ಚ್ ೧೫ರಿಂದ ಆರಂಭವಾಗಲಿದೆ.
ಅಮೆರಿಕಾ ಕ್ರಿಕೆಟ್ ತಂಡವು ಕೈಗೊಳ್ಳುವ ಯುಎಇ ಪ್ರವಾಸದಲ್ಲಿ ಎರಡು ಟಿ೨೦ ಅಂತರರಾಷ್ಟ್ರೀಯ ಪಂದ್ಯಗಳು ಹಾಗೂ ಕೆಲವು ೫೦ ಓವರುಗಳ ಪಂದ್ಯಗಳುಂಟು.
ಬರುವ ಏಪ್ರಿಲ್ ತಿಂಗಳಲ್ಲಿ ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ವಿಶ್ವ ಕ್ರಿಕೆಟ್ ಲಿಗ್ ಎರಡನೆಯ ದರ್ಜೆ ಪಂದ್ಯಾವಳಿಗಾಗಿ ಒಳ್ಳೆಯ ಸಿದ್ಧತೆ ನೀಡಲಿದೆ ಎಂದು ಅಮೆರಿಕಾ ಕ್ರಿಕೆಟ್ ತಂಡ ಆಶಿಸುತ್ತದೆ.
ಸೌರಭ್ ನೇತ್ರವಲ್ಕರ್, ಹಿಂದೆ ಭಾರತದ ಕಿರಿಯರ ತಂಡ (Under-19) ತಂಡದ ಸದಸ್ಯರಾಗಿದ್ದರು. ನಂತರ ಆರೆಕಲ್ ಸಂಸ್ಥೆ ಉದ್ಯೋಗಿಯಾಗಿ ಅಮೆರಿಕಾಗೆ ಹೋದರು. ಅಲ್ಲಿ ಕ್ರಿಕೆಟ್ ತಂಡಗಳಿರುವುದನ್ನ ಮನಗಂಡು, ತಮ್ಮ ವೃತ್ತಿಪರ ಕ್ರಿಕೆಟ್ ಆಟ ಮುಂದುವರೆಸಿ, ಈಗ ಅಮೆರಿಕಾ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಮೂಂಬಯಿ ಮೂಲದ ಸೌರಭ್, ಎಡಗೈ ವೇಗದ ಬೌಲರ್ ಹಾಗು ಬಲಗೈ ಬ್ಯಾಟುಗಾರ.
ಸೌರಭ್ ಅಲ್ಲದೆ, ವೆಸ್ಟ್ ಇಂಡೀದ್ ತಂಡದ ಮಾಜಿ ಆಟಗಾರ ಕ್ಷೇವಿಯರ್ ಮಾರ್ಷಲ್ ಹಾಗೂ ಜಸದೀಪ್ ಸಿಂಗ್ ಪ್ರಮುಖ ಸದಸ್ಯರಾಗಿದ್ದಾರೆ.
ಯುಎಸ್‌ಎಕ್ರಿಕೆಟ್ ಆಕ್ಕೆಗಾರರ ಮಂಡಳಿಯ ಅಧ್ಯಕ್ಷ ರಿಕಾರ್ಡೊ ಪೊವೆಲ್ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರರಾಗಿದ್ದರು.
ಕ್ರಿಕೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಅಧಿಕೃತ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದು ಇಂಗ್ಲೆಂಡ್ ಆಗಲಿ, ಆಸ್ಟ್ರೇಲಿಯಾ ಆಗಲಿ ಅಲ್ಲ, ಅಮೆರಿಕಾ ಮತ್ತು ಕೆನಡಾ. ಹತ್ತೊಂಬತ್ತನೆಯ ಶತಮಾನದಲ್ಲಿ (೧೮೪೪ರಲ್ಲಿ) ಅಮೆರಿಕಾ ಮತ್ತು ಕೆನಡಾ, ಮೂರು ದಿವಸಗಳ ಕಾಲ ನಡೆದ ಅಂತರರಾಷ್ಟ್ರೀಯ ಪಂದ್ಯವನ್ನು ನ್ಯೂಯಾರ್ಕ್‌ನ ಸೇಂಟ್ ಜಾರ್ಜ್ಸ್ ಕ್ರಿಕೆಟ್ ಕ್ಲಬ್‌ನಲ್ಲಿ ಆಡಿದವು. ಕೆನಡಾ ಅಮೆರಿಕಾ ತಂಡವನ್ನು ೨೩ ರನ್‌ಗಳಿಂದ ಸೋಲಿಸಿತು.
ಸ್ಕೋರ್: ಕೆನಡಾ ೮೨ ಮತ್ತು ೬೩; ಅಮೆರಿಕಾ ೬೪ ಮತ್ತು ೫೮.
ಚಿತ್ರ ಕೃಪೆ: USACricket Twitter
