ಕುಮಾರಪರ್ವತ (ಪುಷ್ಪಗಿರಿ) ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಮತ್ತು ದಕ್ಷಿಣ ಕನ್ನಡ ಜಲ್ಲೆಯ ಸುಳ್ಯ ತಾಲೂಕಿನ ಗಡಿಯಲ್ಲಿದೆ. ಇದು ಕರ್ನಾಟಕದಲ್ಲಿ ನಾಲ್ಕನೆಯ ಅತ್ಯೆತ್ತರದ ಶಿಖರ, ಹಾಗೂ ಕೊಡಗು ಜಿಲ್ಲೆಯಲ್ಲಿ ತಡಿಯಂಡಮೋಳ್ ನಂತರ ಎರಡನೆಯ ಅತ್ಯೆತ್ತರದ ಶಿಖರ. ಇದು ಚಾರಣಿಗರಿಗೆ ನೆಚ್ಚಿನ ತಾಣ ಎನ್ನಲಾಗಿದೆ.
ಬೇಸಿಗೆಯಲ್ಲಿ ಇಲ್ಲಿನ ಹುಲ್ಲುಗಾವಲು ಮತ್ತು ಶೋಲಾ ಕಾಡು ಒಣಗಿದ ಸ್ಥಿತಿಯಲ್ಲಿರುವ ಕಾರಣ ಬಹಳ ಬೇಗ ಕಾಳ್ಗಿಚ್ಚು ಹತ್ತಿ ಹರಡುತ್ತದೆ. ಕಳೆದ ವರ್ಷ ಸಂಭವಿಸಿದ ಈ ಅನಾಹುತವನ್ನು ಪರಿಗಣಿಸಿ ಈ ಬಾರಿ ಅರಣ್ಯ ಇಲಾಖೆಯು ಬೇಸಿಗೆಯ ಆರಂಭದ ಮುನ್ನವೇ ಎಚ್ಚರಿಕೆ ಹೊರಡಿಸಿದೆ.
“ಬೇಸಿಗೆಯಲ್ಲಿ ವಾರಾಂತ್ಯಗಳಲ್ಲಿ ಸುಮಾರು ನೂರೋ ನೂರಿಪ್ಪತ್ತೋ ಜನರು ಚಾರಣಕ್ಕಾಗಿ ಬರುತ್ತಾರೆ. ಮೇಲಿಂದ ಬಂಡೆ ಕೆಳಕ್ಕೆ ಉರುಳಿಕೊಂಡು ಬಂದಾಗಲೂ ಘರ್ಷಣೆಯುಂಟಾಗಿ ಕಾಳ್ಗಿಚ್ಚು ಸಂಭವಿಸುವ ಅಪಾಯವಿದೆ. ಕಳೆದ ವರ್ಷ ತಮಿಳುನಾಡಿನಲ್ಲಿ ಕಾಳ್ಗಿಚ್ಚು ಸಂಭವಿಸಿ ಕೆಲ ಜನರು ದಹನಗೊಂಡಿದ್ದನನ್ನು ನಾವು ಮರೆಯಲು ಸಾಧ್ಯವಿಲ್ಲ. ಈ ಕಾರಣ, ಕುಮಾರಪರ್ವತದಲ್ಲಿ ಮುಂಗಾರಿನ ಆಗಮನದ ವರೆಗೂ ಚಾರಣವನ್ನು ನಿಷೇಧಿಸಿದ್ದೇವೆ. ಕಾಡಿನ ಎಲ್ಲಾ ಪ್ರವೇಶ ದ್ವಾರಗಳಲ್ಲಿಯೂ ಬ್ಯಾನರ್ ಕಟ್ಟಿ ನಿಷೇಧದ ಮಾಹಿತಿ ಹಾಕಿದ್ದೇವೆ. ಅನುಮತಿಯಿಲ್ಲದೇ ಕಾಡನ್ನು ಪ್ರವೇಶಿಸುವವರು ವನ್ಯಜೀವಿ ರಕ್ಷಣಾ ಕಾಯಿದೆ ೧೯೭೨ರ ಅಡಿ ಶಿಕ್ಷೆ ವಿಧಿಸಲಾಗುವುದು” ಎಂದು ಅರಣ್ಯಾಧಿಕಾರಿ ಶ್ರೀನಿವಾಸ ನಾಯಕ್ ತಿಳಿಸಿದರು.
ಕುಮಾರಪರ್ವತದ ಕಡೆ ಹೋಗುವ ಮಾರ್ಗಗಳನ್ನೆಲ್ಲ ಮುಚ್ಚಿ ಎಚ್ಚರಿಕೆಯ ಬ್ಯಾನರ್ ಕಟ್ಟಿಹಾಕಲು ಅರಣ್ಯ ಇಲಾಖೆಯು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
“ಅಲ್ಲಿನ ಕಾಡು ಒಣಗಿದೆ, ಹುಲ್ಲುಗಾವಲು ಒಣಗಿ ಹಳದಿ ಬಣ್ನಕ್ಕೆ ತಿರುಗಿದೆ. ಅರಣ್ಯ ಇಲಾಖೆಯು ಈ ಬಾರಿ ಮಾರ್ಚ್ ಬದಲು ಫೆಬ್ರುವರಿ ತಿಂಗಳಲ್ಲೇ ಎಚ್ಚರಿಕೆ ನೀಡಿದ್ದು ಒಳ್ಳೆಯದೇ ಆಯಿತು. ಅರಣ್ಯ ಇಲಾಖೆಯವರು ಬೆಂಕಿ ಪೊಟ್ಟಣ ಮತ್ತು ಮದ್ಯ ಒಯ್ಯುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಲು ನಮ್ಮ ಸರಕುಗಳನ್ನು ತಪಾಸಣೆ ಮಾಡಿದರು” ಎಂದು ಈಗಾಗಲೇ ಕುಮಾರಪರ್ವತ ಚಾರಣ ಮಾಡಿ ಬಂದವರು ಹೇಳುತ್ತಾರೆ.
